
ಕೋಟ (ಬ್ರಹ್ಮಾವರ): ಉಡುಪಿ ಜಿಲ್ಲೆಯ ಎಲ್ಲಾ ಎ.ಪಿ.ಎಂ.ಸಿ.ಗಳಲ್ಲಿ ಬಿಳಿ ಭತ್ತವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದು, ಕೆಂಪು ಭತ್ತ ಖರೀದಿಗೆ ಅವಕಾಶವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಕೆಂಪು ಭತ್ತ ಖರೀದಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ರೈತಧ್ವನಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಜಿಲ್ಲೆಯ ರೈತರು 5,350 ಹೆಕ್ಟೇರ್‌ಗಳಲ್ಲಿ ಕೆಂಪು ಅಕ್ಕಿ ಎಂ.ಒ 4, ಜಯ ಇತ್ಯಾದಿ ತಳಿಗಳನ್ನು ಬೆಳೆಯುತ್ತಿದ್ದು, ಸರ್ಕಾರ, ಇಲಾಖೆಯ ನಿರ್ಲಕ್ಷ್ಯದಿಂದ ರೈತರಿಗೆ ಸಮಸ್ಯೆಯಾಗಿದೆ. ಹೀಗಾಗಿ ಕೆಂಪು ಭತ್ತ ಖರೀದಿ ಮಾಡಲು ಅನುಮತಿ ನೀಡಬೇಕು. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಮಿಲ್ಲುಗಳಲ್ಲಿ ಖರೀದಿ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಿದ ಕಿರಿಯ ಅಧಿಕಾರಿಗಳು ಪೂರಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರೈತರ ನಿಯೋಗದಲ್ಲಿ ಜಯರಾಮ ಶೆಟ್ಟಿ, ಟಿ. ಮಂಜುನಾಥ ಗಿಳಿಯಾರು, ಬಾಬು ಶೆಟ್ಟಿ, ಶಿವಮೂರ್ತಿ ಉಪಾಧ್ಯಾಯ, ಕೀರ್ತಿಶ ಪೂಜಾರಿ, ರಾಘವೇಂದ್ರ ಶೆಟ್ಟಿ, ಮಂಜುನಾಥ ಭಂಡಾರಿ, ತಿಮ್ಮ ಕಾಂಚನ್, ಮಹಾಬಲ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.