ಉಡುಪಿ: ಜಿಲ್ಲಾಡಳಿತದ ನೀತಿಯಿಂದ ಕೆಂಪು ಕಲ್ಲುಗಳು ಸಿಗದೆ ಬಡವರ ಮನೆ ಕಟ್ಟುವ ಕನಸು ನುಚ್ಚು ನೂರಾಗಿದೆ. ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ನಿರುದ್ಯೋಗಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಆರಂಭಗೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಡವರು ಮನೆಯನ್ನು ಪಿಲ್ಲರ್‌ನಿಂದ ಕಟ್ಟಲು ಸಾಧ್ಯವಿಲ್ಲದಿರುವುದರಿಂದ ಕೆಂಪು ಕಲ್ಲನ್ನು ಅವಲಂಬಿಸಿದ್ದಾರೆ. ಆದರೆ ಕೆಂಪುಕಲ್ಲು ಸಿಗದೆ ಸಂಕಷ್ಟದಲ್ಲಿದ್ದಾರೆ. ಮುಂದೆ ಮರಳು ಸಮಸ್ಯೆಯೂ ಬಿಗಡಾಯಿಸಲಿದೆ ಎಂದು ಅವರು ತಿಳಿಸಿದರು.
ಕೇರಳ ಮಾದರಿಯಲ್ಲಿ ರಾಜಧನ ಅಥವಾ ರಾಯಲ್ಟಿಯನ್ನು ಪ್ರತಿ ಟನ್‌ಗೆ ₹76 ಮಾತ್ರ ಪಾವತಿಸಲು ಅವಕಾಶ ನೀಡಬೇಕು. ಈಗ ಇರುವ ಬೇರೆ ಬೇರೆ ತೆರಿಗೆಗಳನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.
ಆರು ತಿಂಗಳಿಗೊಮ್ಮೆ ಪರವಾನಗಿ ನವೀಕರಿಸುವುದನ್ನು ಕೈ ಬಿಟ್ಟು ವರ್ಷಕೊಮ್ಮೆ ನವೀಕರಿಸಲು ಅವಕಾಶ ನೀಡಬೇಕು. ಅದರಿಂದ ಅನಧಿಕೃತ ವ್ಯವಹಾರ ತಡೆಯಲು ಸಾಧ್ಯವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ದೊರಕುವ ಕೋರೆಗಳು ಕಡಿಮೆ ಇರುವುದರಿಂದ ದಕ್ಷಿಣ ಕನ್ನಡದ ಕೋರೆಗಳಿಂದ ಬರುವ ಕೆಂಪು ಕಲ್ಲುಗಳಿಗೆ ನಿರ್ಬಂಧ ಹೇರಬಾರದು ಎಂದು ಒತ್ತಾಯಿಸಿದರು.
ಕೆಂಪು ಕಲ್ಲು ದುಬಾರಿ ದರದಲ್ಲಿ ಮಾರಾಟ ಮಾಡುವವರ ವಿರದ್ದ ಕ್ರಮ ಜರುಗಿಸಬೇಕು. ಈ ಹಿಂದಿನ ದರದಂತೆ ಕಲ್ಲು ಜನರಿಗೆ ಸಿಗುವಂತಾಗಬೇಕು. ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಜಂಟಿ ಸಭೆ ನಡೆಸಲು ಸಮಯ ನಿಗದಿಗೊಳಿಸಬೇಕು ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಜಿಲ್ಲೆಯಲ್ಲಿ ಕೆಂಪು ಕಲ್ಲಿಗಾಗಿ ಜಿಲ್ಲಾಡಳಿತ ಗುರುತಿಸಿದ 147 ಸ್ಥಳಗಳಲ್ಲಿ ಗುಣಮಟ್ಟದ ಕೆಂಪು ಕಲ್ಲುಗಳು ಲಭ್ಯವಿಲ್ಲದ ಕಾರಣ ಪೂರೈಕೆ ಕಡಿಮೆಯಾಗಿ ಅವಶ್ಯಕತೆ ಜಾಸ್ತಿಯಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತವು ಗುಣಮಟ್ಟದ ಕಲ್ಲು ಸಿಗುವ ಸ್ಥಳಗಳಲ್ಲಿ ಕೋರೆಗಳಿಗೆ ಕಾನೂನುಬದ್ಧ ಪರವಾನಗಿ ನೀಡಿ, ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಚಂದ್ರಶೇಖರ ವಿ.,ರಾಮ ಕಾರ್ಕಡ, ಶಶಿಧರ ಗೊಲ್ಲ, ಕವಿರಾಜ್ ಎಸ್. ಕಾಂಚನ್, ಸುಭಾಶ್ಚಂದ್ರ ನಾಯಕ್, ಚಿಕ್ಕ ಮೊಗವೀರ ಗಂಗೊಳ್ಳಿ, ರಾಜೀವ ಪಡುಕೋಣೆ, ಶ್ರೀಧರ ಉಪ್ಪುಂದ, ರಮೇಶ್ ಗುಲ್ವಾಡಿ, ನಾಗರತ್ನ ಪಡುವರಿ, ಜ್ಯೋತಿ, ಶಾಂತಾ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು. ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಸ್ವಾಗತಿಸಿದರು.
ಜಿಲ್ಲೆಯಲ್ಲಿರುವ ಕೆಂಪು ಕಲ್ಲು ಅಥವಾ ಮುರುಕಲ್ಲು ಎಂದು ಕರೆಯಲ್ಪಡುವ ಲ್ಯಾಟರೈಟ್ ಕೋರೆಗಳಿಗೆ ಅಪಾಯವಿಲ್ಲದ ಸ್ಥಳಗಳಲ್ಲಿ ಪರವಾನಗಿ ನೀಡಬೇಕುಬಾಲಕೃಷ್ಣ ಶೆಟ್ಟಿ ಸಿಐಟಿಯು ರಾಜ್ಯ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.