ADVERTISEMENT

ಆಸ್ಕರ್ ಅಭಿವೃದ್ಧಿ ಕಾರ್ಯಗಳು ಸ್ಮರಣೀಯ: ರಮಾನಾಥ ರೈ

ಅಭಿಮಾನಿ ಬಳಗದಿಂದ ನುಡಿನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 12:47 IST
Last Updated 21 ಅಕ್ಟೋಬರ್ 2021, 12:47 IST
ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದಿಂದ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಾಂಗಣದಲ್ಲಿ ಈಚೆಗೆ 'ನುಡಿ ನಮನ' ಕಾರ್ಯಕ್ರಮ ನಡೆಯಿತು.
ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದಿಂದ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಾಂಗಣದಲ್ಲಿ ಈಚೆಗೆ 'ನುಡಿ ನಮನ' ಕಾರ್ಯಕ್ರಮ ನಡೆಯಿತು.   

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಸ್ಕರ್ ಫರ್ನಾಂಡಿಸ್ ಮಾಡಿರುವ ಅಭಿವೃದ್ದಿ ಕಾರ್ಯಗಳು ಅವಿಸ್ಮರಣೀಯ. ರಾಜಕೀಯ ಎದುರಾಳಿಗಳನ್ನು ಪ್ರೀತಿಸಿದ ಆಸ್ಕರ್‌ ಮಾತೃ ಹೃದಯಿ ಎಂದು ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.

ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದಿಂದ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 'ನುಡಿ ನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಸ್ಕರ್ ಧರ್ಮ ಮತ್ತು ರಾಜಕೀಯ ಮೀರಿ ಬೆಳೆದವರು. ನೆಹರೂ ಕುಟುಂಬಕ್ಕೆ ಹತ್ತಿರವಾಗಿದ್ದುಕೊಂಡು ಜನರ ಪ್ರೀತಿ ವಿಶ್ವಾಸಗಳಿಸಿದರು. ಕಠಿಣ ಶ್ರಮ, ನಂಬಿಕೆ, ವಿಶ್ವಾಸವೇ ರಾಷ್ಟ್ರದ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಲು ಕಾರಣವಾಯಿತು. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಪ್ರಚಾರ ಬಯಸದೆ ದೂರವಿದ್ದ ರಾಜಕಾರಣಿ, ದೇಶದಲ್ಲಿ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ನೀಡುವುದರ ಜತೆಗೆ 8 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕಾರಣಕರ್ತರಾದರು ಎಂದರು.

ADVERTISEMENT

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ದೀರ್ಘಾವಧಿ ರಾಜಕೀಯ ಮಾಡುವ ಮೂಲಕ ನಾಯಕನಾಗಿ ಪ್ರಜ್ವಲಿಸಿದವರು ಆಸ್ಕರ್ ಫರ್ನಾಂಡಿಸ್‌. ದೆಹಲಿಯ ಕಚೇರಿಯಲ್ಲಿ ತಡರಾತ್ರಿಯವರೆಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಅವರು ಜನಪ್ರತಿನಿಧಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಪ್ರೇರಣೆ ಎಂದರು.

ಆಸ್ಕರ್ ಫರ್ನಾಂಡಿಸ್ ಮಾನವೀಯ ನೆಲೆಯಲ್ಲಿ ಹಲವರಿಗೆ ನೆರವು ನೀಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಕಷ್ಟ ಎದುರಾದಾಗ ಆಸ್ಕರ್ ಸಾಂತ್ವನ ಹೇಳಿದ್ದನ್ನು ಮರೆಯಲಾಗದು. ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜಕೀಯ ದೃಷ್ಟಿಯಿಂದ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದರು.

ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದ ಅಧ್ಯಕ್ಷ ರೊನಾಲ್ಡ್ ಮನೋಹರ್ ಕರ್ಕಡ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಆಸ್ಕರ್ ಧರ್ಮ ಮತ್ತು ಪಕ್ಷವನ್ನು ಮೀರಿ ಬೆಳೆದರು. ಸ್ವಪಕ್ಷೀಯರ ಜತೆಗೆ ಇತರ ಪಕ್ಷದವರನ್ನು ಗೌರವಿಸುತ್ತಿದ್ದರು. ಉದ್ಯಾವರದಂತಹ ಸಣ್ಣ ಗ್ರಾಮದಿಂದ ದೆಹಲಿಯವರೆಗೂ ಬೆಳೆದು ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದರು ಎಂದರು.

ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟ್ಯಾನಿ ಬಿ.ಲೋಬೊ, ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಾಗೇಶ್ ಕುಮಾರ್ ಉದ್ಯಾವರ, ಎಂ.ಎ.ಗಫೂರ್, ಬಿಪಿನ್ ರಾವ್, ಆಸ್ಕರ್ ಫರ್ನಾಂಡಿಸ್ ಸೊಸೆ ಫ್ರೆಜಿಲ್ ಫರ್ನಾಂಡಿಸ್ ನುಡಿನಮನ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ನವೀನ್ ಡಿಸೋಜಾ, ಫಾದರ್ ವಿಲಿಯಂ ಮಾರ್ಟಿಸ್, ಪ್ರಮುಖರಾದ ದಿನೇಶ್ ಪುತ್ರನ್, ಡೆರಿಕ್ ಡಿಸೋಜ, ನವೀನ್ ಚಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಮೇರಿ ಡಿಸೋಜ, ಹರೀಶ್ ಶೆಟ್ಟಿ, ರೋಶನಿ ಒಲಿವೆರಾ, ಅನಿತಾ ಡಿಸೋಜಾ, ದೀಪಕ್ ಹೆಗ್ಡೆ, ಮೇರಿ ಡಿಸೋಜಾ, ನೇರಿ ಕರ್ನೇಲಿಯೊ ಉಪಸ್ಥಿತರಿದ್ದರು.

ಪವಿತ್ರ ಬಲಿಪೂಜೆ ಮತ್ತು ರಕ್ತದಾನ ಶಿಬಿರ ನಡೆಯಿತು. ಮಾಜಿ ಶಾಸಕ ಜೆ.ಆರ್.ಲೋಬೊ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಮೊಹಮ್ಮದ್ ಶ್ರೀಶ್ ಸ್ವಾಗತಿಸಿದರು. ಸಂಚಾಲಕ ಸ್ಟೀವನ್ ಕುಲಾಸೊ ಪ್ರಾಸ್ತಾವಿಕ ಮಾತನಾಡಿದರು. ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.