ADVERTISEMENT

ಬಾಡಿಗೆ ದ್ವಿಚಕ್ರ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಆಟೊ ಚಾಲಕರಿಂದ ಒಂದು ದಿನದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 13:31 IST
Last Updated 18 ನವೆಂಬರ್ 2019, 13:31 IST
ಬಾಡಿಗೆ ಬೈಕ್‌ ಕಂಪೆನಿಗಳ ವಿರುದ್ಧ ಆಟೊ ಚಾಲಕರು ಸೋಮವಾರ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಶಾಸಕ ರಘುಪತಿ ಭಟ್‌ ಮಾತನಾಡಿದರು.
ಬಾಡಿಗೆ ಬೈಕ್‌ ಕಂಪೆನಿಗಳ ವಿರುದ್ಧ ಆಟೊ ಚಾಲಕರು ಸೋಮವಾರ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಶಾಸಕ ರಘುಪತಿ ಭಟ್‌ ಮಾತನಾಡಿದರು.   

ಉಡುಪಿ: ಉಡುಪಿ ಹಾಗೂ ಮಣಿಪಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ದ್ವಿಚಕ್ರ ವಾಹನ ಬಾಡಿಗೆಗೆ ನೀಡುವ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಈ ಕಂಪನಿಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಮಣಿಪಾಲ ಆಟೊ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಉಡುಪಿ ಜಿಲ್ಲಾ ಆಟೊ ಚಾಲಕರು ಮತ್ತು ಮಾಲೀಕರ ಒಕ್ಕೂಟದ ನೇತೃತ್ವದಲ್ಲಿ ಆಟೊ ಚಾಲಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಮುಷ್ಕರ ನಡೆಸಿದರು.

ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಚಾಲಕರು ತಮ್ಮ ಆಟೊಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಬೆಳಿಗ್ಗೆ 10ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಆಟೊ ಚಾಲಕರು, ದ್ವಿಚಕ್ರ ವಾಹನ ಬಾಡಿಗೆ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ನಗರದ ಪ್ರಮುಖ ಕಡೆಗಳಲ್ಲಿ ತೆರೆಯಲಾಗಿರುವ ಬಾಡಿಗೆ ದ್ವಿಚಕ್ರ ವಾಹನಗಳ ಕಂಪನಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಮಣಿಪಾಲ ಆಟೊ ಚಾಲಕರು ಮತ್ತು ಮಾಲೀಕರ ಸಂಘ ಅಧ್ಯಕ್ಷ ಪ್ರದೀಪ್‌ ಪೂಜಾರಿ ಮಾತನಾಡಿ, ‘ಉಡುಪಿ ತಾಲ್ಲೂಕಿನಲ್ಲಿ ಒಟ್ಟು 6 ಸಾವಿರ ಮಂದಿ ಆಟೊದಲ್ಲಿ ದುಡಿದು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂದ ಜೊಮ್ಯಾ‌ಟೋ, ಸ್ವಿಗ್ಗಿಯಂತಹ ಆಹಾರ ಪೂರೈಕೆ ಸಂಸ್ಥೆಗಳಿಂದ ಆಟೊ ಚಾಲಕರಿಗೆ ಬಾಡಿಗೆ ಇಲ್ಲದೆ ಪರದಾಡುತ್ತಿದ್ದಾರೆ. ಇದೀಗ ಬಾಡಿಗೆ ವಾಹನಗಳ ಹಾವಳಿಯಿಂದ ಆಟೊ ಚಾಲಕರು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದಾರೆ’ ಎಂದು ಅಳಲು ತೋಡಿಕೊಂಡರು.

ADVERTISEMENT

ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಬಾಡಿಗೆ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಜಿಲ್ಲೆಯನ್ನು ಬಂದ್‌ ಮಾಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳು ಸ್ಥಳೀಯವಾಗಿ ಯಾವುದೇ ಅನುಮತಿ ಪಡೆಯದೆ ಬಾಡಿಗೆಗೆ ಬೈಕ್‌ಗಳನ್ನು ನೀಡುತ್ತಿದ್ದು, ಇದರಿಂದ ಬಡ ಆಟೊ ಚಾಲಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಅಲ್ಲದೆ ಈ ಬಾಡಿಗೆ ಬೈಕ್‌ಗಳನ್ನು ಅಕ್ರಮ ವ್ಯವಹಾರ, ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇವೆ. ಹಾಗಾಗಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು, ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುವ ‘ಬೌನ್ಸ್‌’ ಕಂಪೆನಿಗೆ ಉಡುಪಿಯಲ್ಲಿ ಆರಂಭಿಸಲು ಆರ್‌ಟಿಒ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಬೌನ್ಸ್‌ ಬೈಕ್‌ಗಳನ್ನು ನಿಲ್ಲಿಸಿ, ಬಾಡಿಗೆಗೆ ಬೈಕ್‌ ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ತಿಳಿಸಿದ್ದೇನೆ. ಅಲ್ಲದೆ ಬೈಕ್‌ಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದೇನೆ ಎಂದರು.

ಪರವಾನಗಿ ಸಿಗುವವರೆಗೂ ಬೌನ್ಸ್‌ ಬೈಕ್‌ಗಳನ್ನು ಇಡಬಾರದು ಎಂದು ಈಗಾಗಲೇ ಕಂಪೆನಿಗಳಿಗೆ ಸೂಚಿಸಲಾಗಿದೆ. ಅನುಮತಿ ನೀಡುವ ವಿಚಾರ ನಮಗೆ ಬರುವುದಿಲ್ಲ. ಅದು ರಾಜ್ಯ ಸರ್ಕಾರದ ಮಟ್ಟದಿಂದ ಆಗಬೇಕಾಗಿದೆ. ಒಂದು ವೇಳೆ ಸರ್ಕಾರದಿಂದ ಅವರು ಅನುಮತಿ ಪಡೆದುಕೊಂಡು ಬಂದರೆ, ಅದನ್ನು ನಮ್ಮಿಂದ ನಿಲ್ಲಿಸಲು ಆಗವುದಿಲ್ಲ ಎಂದು ಹೇಳಿದರು.

9 ಬೌನ್ಸ್‌ ಬೈಕ್‌ ವಶ

ಮಣಿಪಾಲ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ 9 ಬೌನ್ಸ್‌ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಬೈಕ್‌ಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಆರ್‌ಟಿಒ ಹಾಗೂ ನಗರಸಭೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.

ಡಿಸಿ ಭರವಸೆ; ಮುಷ್ಕರ ವಾಪಸ್‌

ಬೌನ್ಸ್‌ ಬೈಕ್‌ಗಳ ವಿರುದ್ಧ ಡಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಟೊ ಚಾಲಕರು ಮುಷ್ಕರವನ್ನು ಹಿಂಪಡೆದರು.

ಒಕ್ಕೂಟದ ಅಧ್ಯಕ್ಷ ಮಹೇಶ್‌ ಠಾಕೂರ್‌, ಕೃಷ್ಣಮೂರ್ತಿ ಆಚಾರ್ಯ, ನಗರಸಭಾ ಸದಸ್ಯರಾದ ಮಂಜುನಾಥ್‌ ಮಣಿಪಾಲ, ರಮೇಶ್‌ ಕಾಂಚನ್‌, ಸಂಘದ ಕಾರ್ಯದರ್ಶಿ ಹರೀಶ್‌ ಪೂಜಾರಿ, ಆಶ್ರಯದಾತ ಆಟೊ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.