ಉಡುಪಿಯ ಡಯಾನ ಮುಖ್ಯ ರಸ್ತೆಯ ರೈಲ್ವೆ ಸೇತುವೆ ಮೇಲಿನ ರಸ್ತೆ ಹದಗೆಟ್ಟಿರುವುದು
–ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ
ಉಡುಪಿ: ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ತೀರಾ ಹದಗೆಟ್ಟು ತಿಂಗಳುಗಳೇ ಕಳೆದರೂ ಇವುಗಳಿಗೆ ದುರಸ್ತಿ ಭಾಗ್ಯ ಮಾತ್ರ ಇನ್ನೂ ಒದಗಿ ಬಂದಿಲ್ಲ.
ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಬಂದರೂ ರಸ್ತೆಗಳ ಹೊಂಡ ಮುಚ್ಚುವ ಕಾರ್ಯ ನಡೆದಿಲ್ಲ. ಸಂಬಂಧಪಟ್ಟವರು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ಜನರು ದೂರುತ್ತಾರೆ.
ರಸ್ತೆಗಳ ಅವ್ಯವಸ್ಥೆಯಿಂದಾಗಿ ಪದೇ ಪದೇ ಅಪಘಾತಗಳೂ ನಡೆಯುತ್ತಿವೆ. ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಸಭೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದ ರಸ್ತೆಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದರೂ ಸಂಬಂಧಪಟ್ಟವರು ಹೊಂಡ ಮುಚ್ಚುವ ಕಾರ್ಯಕ್ಕೂ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದ ನಿತ್ಯ ತೊಂದರೆ ಅನುಭವಿಸುವ ಜನರನ್ನು ನಗರದ ಇತರ ರಸ್ತೆಗಳೂ ಹೈರಾಣ ಮಾಡಿವೆ.
ಅಂಬಲಪಾಡಿ ಬೈಪಾಸ್‌ನಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಬ್ರಹ್ಮಗಿರಿ ಸರ್ಕಲ್‌ನಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಡೆಗೆ ತೆರಳುವ ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ.
ಜನರ ಒತ್ತಾಯಕ್ಕೆ ಮಣಿದು ನಗರ ಸಭೆಯವರು ಈ ರಸ್ತೆಯ ತೇಪೆ ಕಾರ್ಯ ನಡೆಸಿದ್ದರೂ ಕೆಲವೇ ದಿನಗಳಲ್ಲಿ ಅದು ಹಳೆಯ ಸ್ಥಿತಿಗೆ ಮರಳಿತ್ತು. ಮಳೆ ಬಂದರೆ ಇಂತಹ ರಸ್ತೆಗಳಲ್ಲಿ ತೆರಳಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪರದಾಡಬೇಕಾಗುತ್ತದೆ.
ನಗರದ ಬಹುತೇಕ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗುತ್ತದೆ. ಇದು ರಸ್ತೆ ಹದಗೆಡಲು ಮುಖ್ಯ ಕಾರಣವಾಗಿದೆ.
ರಾತ್ರಿ ವೇಳೆ ಇಂತಹ ರಸ್ತೆಗಳಲ್ಲಿ ತೆರಳುವಾಗ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ಇನ್ನು ಕರಾವಳಿ ಬೈಪಾಸ್‌ನಿಂದ ಮಲ್ಪೆಗೆ ತೆರಳುವ ರಸ್ತೆಯ ಅವ್ಯವಸ್ಥೆ ಹೇಳತೀರದು.
ಈ ರಸ್ತೆಯು ಆದಿ ಉಡುಪಿಯಲ್ಲಿ ತೀರಾ ಹದಗೆಟ್ಟಿದೆ, ಇನ್ನು ಮಲ್ಪೆ ತಲುಪುವಲ್ಲಿ ಕೂಡ ರಸ್ತೆ ಯಾವುದು ಹೊಂಡ ಯಾವುದು ಎಂಬುದೇ ತಿಳಿಯುವುದಿಲ್ಲ. ಈ ರಸ್ತೆಯಲ್ಲಿ ಹೊಂಡ ತಪ್ಪಿಸಲು ಹೋಗಿ ಹಲವು ದ್ವಿಚಕ್ರ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ದಿನಂಪ್ರತಿ ಕೋಟಿಗಟ್ಟಲೆ ವ್ಯವಹಾರ ನಡೆಯುವ ಮಲ್ಪೆ ಮೀನುಗಾರಿಕಾ ಬಂದರಿಗೆ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ತೆರಳುತ್ತವೆ. ಆದರೆ, ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಿಲ್ಲ. ಮಲ್ಪೆ ಬೀಚ್‌ಗೂ ಇದೇ ರಸ್ತೆಯಲ್ಲಿ ತೆರಳಬೇಕಾಗಿರುವುದರಿಂದ ರಜಾ ದಿನಗಳಲ್ಲಿ ಸಾವಿರಾರು ಮಂದಿ ಇದರಲ್ಲಿ ಓಡಾಡುತ್ತಾರೆ.
ಕಲ್ಯಾಣಪುರ ಜಂಕ್ಷನ್, ಸಂತೆಕಟ್ಟೆ ಮಾರುಕಟ್ಟೆ ರಸ್ತೆ, ಕುಕ್ಕಿಕಟ್ಟೆ ಮುಖ್ಯರಸ್ತೆ, ಸರಸ್ವತಿ ಶಾಲೆ ಎದುರಿನ ರಸ್ತೆ, ಡಯಾನ ಮುಖ್ಯರಸ್ತೆಯಲ್ಲಿ ಬರುವ ರೈಲ್ವೆ ಸೇತುವೆ ಮೇಲಿನ ರಸ್ತೆ, ಬನ್ನಂಜೆಯಿಂದ ಬ್ರಹ್ಮಗಿರಿ ಕಡೆಗಿನ ರಸ್ತೆ, ಅಂಬಲಪಾಡಿ ಬೈಪಾಸ್‌ನಿಂದ ಕಿದಿಯೂರು ಕಡೆಗೆ ತೆರಳುವ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ವಾಹಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಗಳ ಅವ್ಯವಸ್ಥೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ಮಳೆ ಕಡಿಮೆಯಾದ ಮೇಲೆ ದುರಸ್ತಿ ಕಾರ್ಯ ನಡೆಸುತ್ತೇವೆ ಎನ್ನುತ್ತಾರೆ. ಆದರೆ, ಮಳೆ ನಿಂತರೂ ಕೆಲಸ ಮಾತ್ರ ನಡೆಯುತ್ತಿಲ್ಲ ಎಂದು ಜನರು ದೂರಿದ್ದಾರೆ.
ಅಂಬಲಪಾಡಿ ಬೈಪಾಸ್‌ನಿಂದ ಕಿದಿಯೂರು ಮಾರ್ಗವಾಗಿ ಮಲ್ಪೆಗೆ ಸಾಗುವ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಬೇಕುಶಿವರಾಂ ಭಟ್ ಅಂಬಲಪಾಡಿ
ನಗರದ ಹಲವು ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ ದ್ವಿಚಕ್ರ ವಾಹನದಲ್ಲಿ ತೆರಳಲು ಭಯವಾಗುತ್ತಿದೆ. ಮಳೆ ಕಡಿಮೆಯಾಗಿರುವುದರಿಂದ ಈಗಲಾದರೂ ದುರಸ್ತಿ ಮಾಡಬೇಕುಕಿಶೋರ್ ಖಾಸಗಿ ಸಂಸ್ಥೆಯ ಉದ್ಯೋಗಿ ಮಣಿಪಾಲ
ಕೆಲ ತಿಂಗಳ ಹಿಂದೆ ದುರಸ್ತಿಗೊಳಿಸಿದ ರಸ್ತೆಗಳ ಡಾಂಬರು ಕೂಡ ಕಿತ್ತು ಹೋಗಿದೆ. ಕಳಪೆ ಕಾಮಗಾರಿಯಿಂದಾಗಿ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿವೆ. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ನಗರದ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಯಲ್ಲೂ ಹೊಂಡಗಳು ನಿರ್ಮಾಣವಾಗಿ ಆಂಬುಲೆನ್ಸ್‌ಗೆ ಸಂಚರಿಸಲೂ ತೊಂದರೆಯಾಗುತ್ತಿದೆ. ದಿನನಿತ್ಯ ಬೇರೆ ಬೇರೆ ಕಡೆಗಳಿಂದ ವಾಹನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೂ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ತುರ್ತಾಗಿ ರಸ್ತೆ ದುರಸ್ತಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಒತ್ತಾಯಿಸಿದ್ದಾರೆ.
ರಾಜಕಾರಣಿಗಳು ಚುನಾವಾಣೆ ಹತ್ತಿರ ಬರುವಾಗ ಮಾತ್ರ ನಮ್ಮ ಬಳಿ ಬರುತ್ತಾರೆ. ಗೆದ್ದ ಮೇಲೆ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ನಗರದ ರಸ್ತೆಗಳ ಅವ್ಯವಸ್ಥೆಯಿಂದಾಗಿ ಹಲವು ಅಪಘಾತಗಳು ನಡೆದಿವೆ. ರಸ್ತೆಯ ಹೊಂಡ ಮುಚ್ಚುವ ಕಾರ್ಯಕ್ಕೂ ಸಂಬಂಧಪಟ್ಟವರು ಮುಂದಾಗುವುದಿಲ್ಲ. ಕೆಲ ರಸ್ತೆಗಳಲ್ಲಿ ರಿಕ್ಷಾ ಚಲಾಯಿಸುವುದೇ ದುಸ್ತರವಾಗಿದೆ. ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಲು ಕಳಪೆ ಕಾಮಗಾರಿಯೇ ಮುಖ್ಯ ಕಾರಣ. ಸಂಬಂಧಪಟ್ಟವರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಉಡುಪಿಯ ರಿಕ್ಷಾ ಚಾಲಕ ವಿವೇಕ್ ಒತ್ತಾಯಿಸಿದರು.
ನಗರದ ವಿವಿಧ ರಸ್ತೆಗಳು ಹದಗೆಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ರಸ್ತೆ ದುರಸ್ತಿಗಾಗಿ ಅಂದಾಜುಪಟ್ಟಿ ಸಿದ್ಧಪಡಿಸಿದ್ದೇವೆ. ಅದನ್ನು ಸಭೆಯಲ್ಲಿ ಮಂಡಿಸುತ್ತೇವೆ. ಈಗ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ದೀಪಾವಳಿ ಮುಗಿದ ಕೂಡಲೇ ರಸ್ತೆ ದುರಸ್ತಿ ಮಾಡಿಸುತ್ತೇವೆ. ಕೆಲವೆಡೆ ಕೇವಲ ಗುಂಡಿ ಮುಚ್ಚಿದರೆ ಸಾಲದು ಅಲ್ಲಿ ಮರು ಡಾಂಬರೀಕರಣ ಮಾಡಬೇಕಾಗುತ್ತದೆ ಎಂದು ನಗರ ಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದರು.
ರಸ್ತೆಗಳ ದುರವಸ್ಥೆಯಿಂದಾಗಿ ಶಾಲಾ ವಾಹನಗಳಿಗೆ ಆಂಬುಲೆನ್ಸ್‌ಗಳಿಗೆ ದಿನನಿತ್ಯ ದ್ವಿಚಕ್ರ ವಾಹನಗಳಲ್ಲಿ ಕೆಲಸಕ್ಕೆ ತೆರಳುವವರಿಗೆ ತುಂಬಾ ತೊಂದರೆಯಾಗುತ್ತಿದ್ದು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಒಂದು ಬಾರಿ ಮನವಿ ಕೂಡ ಮಾಡಿದ್ದೇನೆ. ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಧ್ವನಿಯೆತ್ತಿದ್ದೇನೆ. ರಸ್ತೆ ದುರಸ್ತಿಗೆ ಮುಂದಾಗುತ್ತೇವೆ ಎಂಬ ಭರವಸೆ ನೀಡಿದ್ದರೂ ನಗರಸಭೆ ಆಡಳಿತವು ಈ ವಿಚಾರವಾಗಿ ಕಾಲಹರಣ ಮಾಡುತ್ತಿದೆ. ನಗರಸಭೆಯ ಮುಂದಿನ ಸಭೆಗಳಲ್ಲೂ ಜನರ ಪರವಾಗಿ ರಸ್ತೆ ದುರಸ್ತಿಗಾಗಿ ಧ್ವನಿ ಎತ್ತುತ್ತೇನೆ ಎಂದು ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.