ADVERTISEMENT

ಹಂದೆ ಉಡುಪ ಯಕ್ಷ ಯುಗಪ್ರವರ್ತಕರು: ಆನಂದರಾಮ ಉಪಾಧ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:03 IST
Last Updated 10 ಜೂನ್ 2025, 14:03 IST
ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸನ್ಮಾನ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷ ಸಾಧಕರನ್ನು ಗೌರವಿಸಲಾಯಿತು.
ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸನ್ಮಾನ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷ ಸಾಧಕರನ್ನು ಗೌರವಿಸಲಾಯಿತು.   

ಕೋಟ (ಬ್ರಹ್ಮಾವರ): ಸಂಘಟನೆ ಮತ್ತು ನಿರಂತರತೆ ಸುಲಭವಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯ ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆ ಅವರು ಯಕ್ಷ ಯುಗಪ್ರವರ್ತಕರು ಎಂದು ಯಕ್ಷಗಾನ ಸಂಶೋಧಕ, ವಿದ್ವಾಂಸ ಆನಂದರಾಮ ಉಪಾಧ್ಯ ಹೇಳಿದರು.

ಕರ್ನಾಟಕ ಯಕ್ಷಧಾಮ ಮಂಗಳೂರು, ಪದ್ಮಕಮಲ ಟ್ರಸ್ಟ್ ಬೆಂಗಳೂರು, ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ಆಯೋಜಿಸಿದ್ದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸನ್ಮಾನ ಯಕ್ಷಗಾನ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಅನೇಕ ಮಕ್ಕಳ ಮೇಳಗಳು ಹುಟ್ಟಿ ಪ್ರದರ್ಶನಗೊಳ್ಳುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಶಸ್ಸಿನ ಗಾಥೆಯೇ ಮೂಲ ಪ್ರೇರಣೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿ ಮೂಡಿಸಿ, ಯಕ್ಷಾಭಿಮಾನಿಗಳ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆಯನ್ನು ಮೆರೆದಿದೆ ಎಂದು ಹೇಳಿದರು.

ADVERTISEMENT

ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್. ಜನಾರ್ದನ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಗಣೇಶ ಶಾನುಭಾಗ, ರಾಮದೇವ ಉರಾಳ, ವೆಂಕಟೇಶ ಹಂದೆ, ಕ್ರಷ್ಣಾನಂದ ಆಚಾರ್, ಮುರಳಿಧರ ನಾವುಡ, ವಿಶ್ವನಾಥ ಉರಾಳ, ಕಲಾ ಪೋಷಕ ಎಂ. ಸುಧೀಂದ್ರ ಹೊಳ್ಳ ಭಾಗವಹಿಸಿದ್ದರು.

ಮಕ್ಕಳ ಯಕ್ಷಗಾನ ಕ್ಷೇತ್ರದ ಸಾಧಕ, ಸಂಘಟಕರು, ಗುರು ಬೆಂಗಳೂರಿನಲ್ಲಿ ನೆಲೆಸಿರುವ ಕೆ. ಮೋಹನ್, ಶ್ರೀನಿವಾಸ ಸಾಸ್ತಾನ, ಕೃಷ್ಣಮೂರ್ತಿ ತುಂಗ, ಡಾ. ಬೇಗಾರು ಶಿವ ಕುಮಾರ್, ಡಾ. ರಾಧಾಕೃಷ್ಣ ಉರಾಳ, ಶಂಕರ ಬಾಳ್ಕುದ್ರು ಅವರಿಗೆ ‘ಸುವರ್ಣ ಸನ್ಮಾನ’ ನೀಡಲಾಯಿತು.

ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರದೀಪ ಮಧ್ಯಸ್ಥ ವಂದಿಸಿದರು. ಮಾಧುರಿ ಶ್ರೀರಾಮ ನಿರೂಪಿಸಿದರು. ಬಳಿಕ ಕಾರ್ಕಳ ಶ್ರೀದೇವಿ ಲಲಿತ ಕಲಾ ಬಳಗದವರಿಂದ ಶಶಿಕಾಂತ್‌ ಶೆಟ್ಟಿ ಕಾರ್ಕಳ ನಿರ್ದೇಶನದಲ್ಲಿ ‘ಶಾಂಭವಿ ವಿಜಯ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.