ಬ್ರಹ್ಮಾವರ: ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಅಂಗಡಿ ಕೋಣೆಗಳ ಮಾಸಿಕ ಬಾಡಿಗೆ ಆಧಾರದಲ್ಲಿ ನಡೆಸುವ ಅವಧಿ ಮುಗಿದಿದ್ದು, ಮುಂದಿನ 12 ವರ್ಷದ ಅವಧಿಗೆ ಬಹಿರಂಗ ಏಲಂ ಕುರಿತು ಚರ್ಚೆ ಆರಂಭವಾದಾಗ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ಶ್ಯಾಮಸುಂದರ ನಾಯರಿ ಅವರು ಏಲಂ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ, ಪ್ರಸ್ತುತ ಏಲಂ ರದ್ದುಪಡಿಸಿ ಕೌನ್ಸೆಲರ್ ಸಮ್ಮುಖದಲ್ಲಿ ಮರು ಏಲಂ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ರಾಜು ಪೂಜಾರಿ ಇಲ್ಲಿವರೆಗೆ ಮೂರು ಬಾರಿ ಅಂಗಡಿ ಕೋಣೆ ಬಾಡಿಗೆಗಾಗಿ ಏಲಂ ಕರೆಯಲಾಗಿದೆ. ಮತ್ತೆ ಪುನಃ ಕರೆಯಲು ಕಾನೂನಿನಲ್ಲಿ ಅವಕಾಶ ಇದೆಯೇ. ಕರೆಯುವುದಾದರೆ ನಿಯಮ ಪ್ರಕಾರ ಕರೆಯಿರಿ. ಪ್ರಸ್ತುತ ₹8 ಸಾವಿರ ಬಾಡಿಗೆ ಬಾರದಿದ್ದವರು ನಾವೇ ಇನ್ನೂ ಹೆಚ್ಚಿನ ದರದಲ್ಲಿ ಬಾಡಿಗೆ ನಿಗದಿ ಮಾಡಿದರೆ ಜನ ಬರುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಸಂಜೀವ ದೇವಾಡಿಗ ಧ್ವನಿಗೂಡಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕಾರ್, ಸರ್ಕಾರದ ನಿಯಮದಂತೆ ಶೇ 25 ಕಡಿಮೆಗೊಳಿಸಿ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಅಂಗಡಿ ಕೋಣೆಯ ಏಲಂ ಪ್ರಕ್ರಿಯೆ ಮಾಡುವ ನಿರ್ಧಾಕ್ಕೆ ಬರೋಣ ಎಂದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಸಂದರ್ಭ ಬಡವರಿಗೊಂದು ಶ್ರೀಮಂತರಿಗೊಂದು ಕಾನೂನು ಮಾಡಬೇಡಿ. ಅವಕಾಶ ಇದ್ದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಒಂದೇ ನಿಯಮ ಪಾಲಿಸಿ ಎಂದು ಸದಸ್ಯ ರಾಜು ಪೂಜಾರಿ ಆಗ್ರಹಿಸಿದರು.
ಸದಸ್ಯೆ ರತ್ನಾ ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಾಣಿ ಸಂಗ್ರಹಾಲಯಕ್ಕೆ ಪದೇ ಪದೇ ನೋಟಿಸು ನೀಡುವ ಅಗತ್ಯತೆ ಬಗ್ಗೆ, ಪುನೀತ್ ಅವರು ಸ್ಮಶಾನಗಳ ಅಭಿವೃದ್ಧಿಗೆ ಬಳಸುವ ಅನುದಾನ ಬಗ್ಗೆ ಚರ್ಚಿಸಿದರು. ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಸೂಯ ಆನಂದರಾಮ ಹೇರ್ಳೇ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.