ADVERTISEMENT

ಮರಳಿನ ಸಮಸ್ಯೆಗೆ ಜಿಲ್ಲಾಧಿಕಾರಿ ಕಾರಣರಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸರ್ಕಾರದ ನಿಯಮಗಳೇ ಸಮಸ್ಯೆಗಳಿಗೆ ಕಾರಣ: ಮುಖ್ಯಮಂತ್ರಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 13:15 IST
Last Updated 30 ಅಕ್ಟೋಬರ್ 2018, 13:15 IST
ಪತ್ರಿಕಾಗೋಷ್ಠಿಯಲ್ಲಿ   ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ   ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು.   

ಉಡುಪಿ:ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಸೃಷ್ಟಿಯಾಗಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕಾರಣರಲ್ಲ. ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಡಿಸಿ ನಡೆಯನ್ನು ಸಮರ್ಥಿಸಿಕೊಂಡರು.

ಬೈಂದೂರು ತಾಲ್ಲೂಕಿನ ತ್ರಾಸಿಯ ಕಾರ್ವಿ ಸಮುದಾಯ ಭವನದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಮರಳು ತೆಗೆಯುತ್ತಿರುವ 92 ಮಂದಿಗೆ ಪರವಾನಗಿ ನೀಡಲು ಜಿಲ್ಲಾಧಿಕಾರಿ ಸಿದ್ಧರಿದ್ದಾರೆ. ಆದರೆ, ಬಿಜೆಪಿ ಶಾಸಕರು 171 ಗುತ್ತಿಗೆದಾರರಿಗೂ ಅನುಮತಿ ನೀಡಿ ಎಂದು ಪಟ್ಟುಹಿಡಿದಿದ್ದಾರೆ. ಹಾಗಾಗಿ ಸಮಸ್ಯೆ ಉದ್ಭವವಾಗಿದೆ ಎಂದರು.

ಬಡವರಿಗೆ ಮನೆಕಟ್ಟಿಕೊಳ್ಳಲು ಮರಳಿನ ಅವಶ್ಯಕತೆ ಇರುವುದು ಗಮನಕ್ಕೆ ಬಂದಿದೆ. ಆದರೆ, ಇಲ್ಲಿ ತೆಗೆಯುವ ಮರಳು ಶ್ರೀಮಂತರ ಮನೆಗಳಿಗೆ ಹೋಗುತ್ತಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಸಿಎಂ ಹೇಳಿದರು.

ADVERTISEMENT

2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕರಾವಳಿಯಲ್ಲಿ ಮರಳಿನ ಸಮಸ್ಯೆ ಇರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಮರಳು ದಂಧೆ ಶುರುವಾಯಿತು. ಸಮಸ್ಯೆ ಬಗೆಹರಿಸುವ ಸಂಬಂಧ ಕಳೆದ 5 ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜತೆ ಐದಾರು ಸಭೆ ನಡೆಸಿದ್ದೇನೆ. ಆದರೂ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ನಿಯಮಗಳೇ ಇದಕ್ಕೆ ಕಾರಣ ಎಂದರು.

ಕರಾವಳಿಯಲ್ಲಿ ಧರ್ಮ ಹಾಗೂ ಹಿಂದುತ್ವದ ಹೆಸರಿನಲ್ಲಿ ಗೆದ್ದುಬಂದಿರುವ ಬಿಜೆಪಿ ಶಾಸಕರು ಜನರ ಕಷ್ಟಗಳನ್ನು ವಿಚಾರಿಸಲು ಬಂದಿಲ್ಲ. 2 ವರ್ಷಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೀನುಗಾರರ ಬೃಹತ್ ಸಮಾವೇಶ ನಡೆಸಿ ಭರವಸೆಗಳ ಮಹಾಪೂರ ಹರಿಸಿದರು. ಇದುವರೆಗೂ ಭರವಸೆಗಳು ಈಡೇರಿಲ್ಲ. ಬದಲಾಗಿ, ಮೀನುಗಾರರಿಗೆ ಹಿಂದೆ ನೀಡಲಾಗುತ್ತಿದ್ದ ಪರವಾನಗಿಯನ್ನು 2400ಕ್ಕೆ ಕಡಿತಗೊಳಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರೈತ ಭೂಮಿಯನ್ನು ನಂಬಿ ಬದುಕುತ್ತಾನೆ. ಹಾಗೆಯೇ ಸಮುದ್ರವನ್ನು ನಂಬಿ ಬದುಕುತ್ತಿರುವ ಮೀನುಗಾರರೂ ರೈತನ ಸಂತತಿಯವರೇ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಸೀಮೆಎಣ್ಣೆ ಸಮಸ್ಯೆ ಮಾತ್ರವಲ್ಲ, ಮೋಟಾರ್ ಬೋಟ್‌ಗೆ ಆರ್ಥಿಕ ನೆರವು, ಜೀವರಕ್ಷಕ ಯೋಜನೆಗಳು, ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಸರ್ಕಾರ ಬದ್ಧವಿದೆ ಎಂದರು.

ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ಮೀನುಗಾರ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಇಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ. ಬಂದರುಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತೇನೆ. ಸರ್ಕಾರ ಮಾತಿಗೆ ತಪ್ಪಿದರೆ 2019ಕ್ಕೆ ಲೋಕಸಭಾ ಚುನಾವಣೆಯಲ್ಲಿ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿ ಎಂದರು.

ಸರ್ಕಾರ ಖಜಾನೆಯಲ್ಲಿ ಹಣದ ಕೊರತೆಯಿಲ್ಲ. ಜನರ ತೆರಿಗೆ ಹಣದಿಂದ ಖಜಾನೆ ಸಮೃದ್ಧವಾಗಿದೆ. ಖಜಾನೆಗೆ ಎಂದೂ ದರಿದ್ರ ಬಂದಿಲ್ಲ. ಆದರೆ, ಯಾವ ರೀತಿ ಕೆಲಸ ಮಾಡಬೇಕು ಎಂಬ ಕುರಿತು ತಿಳಿವಳಿಕೆಯ ಅಗತ್ಯವಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌, ವಿನಯ್ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.