ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಾನದಲ್ಲಿ ಉಡುಪಿ– ಉಚ್ಚಿಲ ದಸರಾ ಮೆರುಗನ್ನು ಸಾರುವ ಬೃಹತ್ ಮರಳು ಶಿಲ್ಪ ಗಮನ ಸೆಳೆಯುತ್ತಿದೆ.
6 ಅಡಿ ಎತ್ತರ 12 ಅಡಿ ಅಗಲವಿರುವ ಶಾರದಾಂಬೆ, ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಅವರ ಭಾವಶಿಲ್ಪದೊಂದಿಗೆ ರಚಿಸಲಾಗಿದೆ. ಉಡುಪಿಯ ಸ್ಯಾಂಡ್ ಥೀಂ, ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಅವರಿಂದ ರಿತೇಶ್ ಕಿದಿಯೂರು ಸಹಕಾರದೊಂದಿಗೆ ರಚಿಸಿರುವ ಆಕರ್ಷಕ ಕಲಾಕೃತಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಉಡುಪಿ ಉಚ್ಚಿಲ ದಸರಾದ 2ನೇ ದಿನವಾದ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉದಯ ಪೂಜೆ, ನಿತ್ಯ ಚಂಡಿಕಾ ಹೋಮ ನವದುರ್ಗೆಯರಿಗೆ ಮಹಾಮಂಗಳಾರತಿ ಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಆರ್ಯಾ ಕಲ್ಪೋಕ್ತ ಪೂಜೆ ನಡೆದವು.
ಭಜನಾ ಸಂಕೀರ್ತನೆ, ಅಮ್ಮ ದ್ರೀಮ್ಸ್ ಮೆಲೋಡೀಸ್ ತಂಡದಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ ಧಾರ್ಮಿಕ ಸಭಾಕಾರ್ಯಕ್ರಮದ ಬಳಿಕ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಅನ್ನಪೂರ್ಣ ರಿತೇಶ್ ನಿರ್ದೇಶನದ ಶಿವಪ್ರಣಾಮ್ ತಂಡದಿಂದ ನೃತ್ಯ ವೈವಿಧ್ಯ, ಕೊಲ್ಲೂರು ಮಹಾತ್ಮೆ ನೃತ್ಯ ರೂಪಕ, ನೃತ್ಯವೈವಿಧ್ಯ ನಡೆದವು.
3ನೇ ದಿನದ ಕಾರ್ಯಕ್ರಮ: ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಸಂಕೀರ್ತನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮೊಗವೀರ ಯುವ ಸಂಘಟನೆಯಿಂದ ಮನರಂಜನಾ ಕಾರ್ಯಕ್ರಮ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಒಂಭತ್ತು ಯಕ್ಷಗಾನ ಭಗವತರಿಂದ ‘ನಾದ ವೈಕುಂಠ’ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.