ಪಡುಬಿದ್ರಿ: ಜನಾರ್ದನ ದೇವಸ್ಥಾನ, ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಎರ್ಮಾಳು ವತಿಯಿಂದ 2024–25ರ ಶೈಕ್ಷಣಿಕ ವರ್ಷದಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಗಳಿಸಿದ 5ನೇ ತರಗತಿಯಿಂದ ಪಿಯುಸಿವರೆಗಿನ ಎರ್ಮಾಳು ತೆಂಕ, ಬಡಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಂಗಳವಾರ ಜನಾರ್ದನ ಜನಕಲ್ಯಾಣ ಸೇವಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ಎರ್ಮಾಳು ಜನಾರ್ದನ ದೇವಳದ ಅರ್ಚಕ ವಿಷ್ಣುಮೂರ್ತಿ ಭಟ್ ಅವರು, ‘ಜನ ಕಲ್ಯಾಣಕ್ಕೆ ಪೂರಕವಾದ ಸೇವೆಯನ್ನು ಜನಾರ್ದನ ಜನ ಕಲ್ಯಾಣ ಸಮಿತಿ ಮಾಡುತ್ತಿದೆ. ಬಡವ ಬಲ್ಲಿದ ಎಂದು ನೋಡದೆ ಸರ್ವರ ಹಿತದೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ವಿದ್ಯಾರ್ಥಿವೇತನ ನೀಡುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜದ ಋಣ ತೀರಿಸುವ ಕಾರ್ಯ ಸಮಿತಿ ಮಾಡುತ್ತಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ ಮಾತನಾಡಿ, 2007ರಲ್ಲಿ ಸ್ಥಾಪಿಸಲ್ಪಟ್ಟ ನಮ್ಮ ಟ್ರಸ್ಟ್, ದೇವಳದ ಏಳಿಗೆಯ ಜೊತೆಗೆ ಪರಿಸರದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದರು.
ಮುಖಂಡ ಲಾಲಾಜಿ ಆರ್. ಮೆಂಡನ್ ಮಾತನಾಡಿದರು. ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 2024–25ರ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಿಂದ ಪಿಯುಸಿವರೆಗಿನ ಶೇ 80ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಯದಡಿ, ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ, ಜ್ಯೋತಿ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ರಾಕೇಶ್ ಎಲ್. ಶೆಟ್ಟಿ, ತೆಂಕ ಗ್ರಾ.ಪಂ. ಅಧ್ಯಕ್ಷೆ ಸುರೇಖಾ, ಸಮಿತಿಯ ಟ್ರಸ್ಟಿಗಳು ಭಾಗವಹಿಸಿದ್ದರು. ಅಮೃತಾ ಪ್ರಾರ್ಥಿಸಿದರು. ಸುರೇಶ್ ಜಿ. ಶೆಟ್ಟಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು. ಓಂಕಾರ್ ಕಲಾ ಸಂಗಮ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.