ADVERTISEMENT

ಉಡುಪಿಯಲ್ಲಿ ಶಾಲಾರಂಭ: ಶೇ 59 ಸರ್ಕಾರಿ ಶಾಲೆ ಮಕ್ಕಳು ಹಾಜರು

ಮಕ್ಕಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಕರು; ತಳಿರು ತೋರಣಗಳಿಂದ ಶಾಲೆಗಳ ಸಿಂಗಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 15:17 IST
Last Updated 1 ಜನವರಿ 2021, 15:17 IST
ಉಡುಪಿ ಬೋರ್ಡ್‌ ಹೈಸ್ಕೂಲ್‌ನಲ್ಲಿ ಶುಕ್ರವಾರ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು.
ಉಡುಪಿ ಬೋರ್ಡ್‌ ಹೈಸ್ಕೂಲ್‌ನಲ್ಲಿ ಶುಕ್ರವಾರ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು.   

ಉಡುಪಿ‌‌: ಕೋವಿಡ್‌–19 ಕಾರಣದಿಂದ ಹಲವು ತಿಂಗಳ ಕಾಲ ಮುಚ್ಚಿದ್ದ ಶಾಲೆಗಳು ಶುಕ್ರವಾರದಿಂದ ಮತ್ತೆ ಆರಂಭವಾಗಿವೆ. ದೀರ್ಘಕಾಲದ ರಜೆಯ ಬಳಿಕ ಶಾಲೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು. ಕಾಪು ತಾಲ್ಲೂಕಿನ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಚೆಂಡೆ ವಾದ್ಯಗಳ ಸಹಿತ ಮೆರವಣಿಗೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಯಿತು.

ಶಾಲೆಗೆ ಬಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಯಂತ್ರದ ಮೂಲಕ ದೇಶದ ಉಷ್ಣಾಂಶ ಪರೀಕ್ಷಿಸಿ ಕೊಠಡಿಯ ಒಳಗೆ ಬಿಡಲಾಯಿತು. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ವಿದ್ಯಾಗಮದ ಮೂಲಕ ಪಾಠಪ್ರವಚನಗಳು ನಡೆದವು. ತರಗತಿಯ ಒಳಗೆ ಅಂತರ ಕಾಯ್ದುಕೊಂಡು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಒಂದು ಕೊಠಡಿಯಲ್ಲಿ 15 ವಿದ್ಯಾರ್ಥಿಗಳು ಕುಳಿತು ಮೊದಲ ದಿನ ಪಾಠ ಕೇಳಿದರು.

ಮೊದಲ ದಿನ ಜಿಲ್ಲೆಯ 473 ಸರ್ಕಾರಿ ಶಾಲೆಗಳ 26,698 ವಿದ್ಯಾರ್ಥಿಗಳ ಪೈಕಿ 15,993 ವಿದ್ಯಾರ್ಥಿಗಳು ಹಾಜರಾಗಿದ್ದರು. 205 ಅನುದಾನಿತ ಶಾಲೆಗಳ 12,626 ವಿದ್ಯಾರ್ಥಿಗಳ ಪೈಕಿ 6,944 ವಿದ್ಯಾರ್ಥಿಗಳು ಬಂದಿದ್ದರು. 142 ಖಾಸಗಿ ಶಾಲೆಗಳ 27,190 ವಿದ್ಯಾರ್ಥಿಗಳ ಪೈಕಿ 10,041 ವಿದ್ಯಾರ್ಥಿಗಳು ಹಾಜರಾಗಿದ್ದರು.

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಜಿಲ್ಲೆಯ ಕೆಲವು ಶಾಲೆಗಳಿಗೆ ಭೇಟಿನೀಡಿ ಸುರಕ್ಷತಾ ಕ್ರಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ದಾಖಲಾತಿ ಹಾಗೂ ಮಕ್ಕಳ ಹಾಗೂ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.