ADVERTISEMENT

1ರಿಂದ 5ನೇ ತರಗತಿ ಆರಂಭ: ಮರಳಿ ಶಾಲೆಗೆ ಬಂದರು ಮಕ್ಕಳು...

51,714 ವಿದ್ಯಾರ್ಥಿಗಳು ಹಾಜರು; ಬ್ಯಾಂಡ್ ಸೆಟ್‌ ಬಾರಿಸಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 13:49 IST
Last Updated 25 ಅಕ್ಟೋಬರ್ 2021, 13:49 IST
ಉಡುಪಿಯ ವಳಕಾಡು ಶಾಲೆಯ ಮಕ್ಕಳು
ಉಡುಪಿಯ ವಳಕಾಡು ಶಾಲೆಯ ಮಕ್ಕಳು   

ಉಡುಪಿ: ಕೋವಿಡ್‌–19ನಿಂದಾಗಿ ಒಂದೂವರೆ ವರ್ಷಗಳ ಕಾಲ ತರಗತಿ ಶಿಕ್ಷಣದಿಂದ ವಂಚಿತರಾಗಿದ್ದ 1ರಿಂದ 5ನೇ ತರ‌ಗತಿ ವಿದ್ಯಾರ್ಥಿಗಳು ಸೋಮವಾರ ಮತ್ತೆ ಶಾಲೆಗಳತ್ತ ಹೆಜ್ಜೆ ಹಾಕಿದರು. ಒಂಟಿಯಾಗಿ ಮನೆಯಲ್ಲಿ ಕುಳಿತು ಆನ್‌ಲೈನ್‌ ಶಿಕ್ಷಣ ಕೇಳುತ್ತಿದ್ದ ಮಕ್ಕಳು ಮತ್ತೆ ಸಹಪಾಠಿಗಳ ಜತೆ ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳಿ ಸಂಭ್ರಮಿಸಿದರು. ಜಿಲ್ಲೆಯಲ್ಲಿ ಶಾಲಾರಂಭದ ಮೊದಲ ದಿನವೇ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ಉತ್ತಮ ಹಾಜರಾತಿ ದಾಖಲಾಗಿದೆ.

ಶಾಲೆಗಳಿಗೆ ಸಿಂಗಾರ:ಸುಧೀರ್ಘ ಅವಧಿಯ ನಂತರ ಶಾಲೆಗಳಿಗೆ ಬರುತ್ತಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಗಳಿಗೆ ಸಿಂಗಾರ ಮಾಡಲಾಗಿತ್ತು. ಬಣ್ಣ ಬಣ್ಣದ ಬಲೂನ್‌ ಹಾಗೂ ಹಸಿರು ತೋರಣಗಳನ್ನು ಕಟ್ಟಲಾಗಿತ್ತು. ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತ ಕೋರಲಾಯಿತು. ಬ್ರಹ್ಮಾವರ ಹೋಬಳಿಯ ಅಂಗಡಿಬೆಟ್ಟು ಸರ್ಕಾರಿ ಶಾಲೆಯಲ್ಲಿ ಬ್ಯಾಂಡ್ ಸೆಟ್‌ ಬಾರಿಸಿ ಮಕ್ಕಳನ್ನು ಶಾಲೆಗಳಿಗೆ ಬರಮಾಡಿಕೊಳ್ಳಲಾಯಿತು. ಬೆನ್ನಿಗೆ ಬ್ಯಾಗ್ ಏರಿಸಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಶಾಲೆಗಳಿಗೆ ಬಂದರು.

ಡಿಡಿಪಿಐ ಎನ್‌.ಎಚ್‌.ನಾಗೂರ ಉಡುಪಿಯ ವಳಕಾಡು ಸರ್ಕಾರಿ ಶಾಲೆಗೆ ಭೇಟಿನೀಡಿ ಮಕ್ಕಳ ಸುರಕ್ಷತೆಗೆ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಬಳಿಕ ಶಾಲೆಯಲ್ಲಿ ಕುಳಿತು ಕೆಲಹೊತ್ತು ಕಲಿಕಾ ಪ್ರಕ್ರಿಯೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, ಜಿಲ್ಲೆಯಾದ್ಯಂತ 1ರಿಂದ 5ನೇ ತರಗತಿ ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಆನ್‌ಲೈನ್ ಕಲಿಕೆಯಿಂದ ಬೇಸರದಲ್ಲಿದ್ದ ಮಕ್ಕಳು ತರಗತಿಯಲ್ಲಿ ಕುಳಿತು ಸಂಭ್ರಮದಿಂದ ಕಲಿಯುತ್ತಿರುವುದು ಕಾಣುತ್ತಿದೆ. 249 ಕಿರಿಯ ಪ್ರಾಥಮಿಕ ಶಾಲೆಗಳು ಆರಂಭವಾಗಿದ್ದು, ಉತ್ತಮ ಹಾಜರಾತಿ ಕಂಡುಬಂದಿದೆ ಎಂದರು.

ಶಾಲಾ ಆರಂಭಕ್ಕೆ ಜಿಲ್ಲೆಯಲ್ಲಿ ಸರ್ವಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲಾಗಿದೆ. ಶೇ 100ರಷ್ಟು ಶಿಕ್ಷಕರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಅ.30ರವರೆಗೆ ಅರ್ಧದಿನ ನ.2ರಿಂದ ಪೂರ್ಣದಿನ ಶಾಲೆಗಳು ನಡೆಯಲಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಎಲ್ಲ ಮಕ್ಕಳು ಮಾಸ್ಕ್ ಹಾಕಿದ್ದಾರೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ, ಅಂತರ ಕಾಪಾಡಿಕೊಳ್ಳಲಾಗುತ್ತಿದೆ ಎಂದು ವಳಕಾಡು ಶಾಲಾ ಶಿಕ್ಷಕಿ ಮಾಹಿತಿ ನೀಡಿದರು.

ಕೋವಿಡ್‌ನಿಂದಾಗಿ ಒಂದೂವರೆ ವರ್ಷ ಮಕ್ಕಳು ಮನೆಯಲ್ಲಿ ಆನ್‌ಲೈನ್‌ ಪಾಠ ಕೇಳುತ್ತಿದ್ದರು. ಈಗ ಶಾಲೆ ಆರಂಭವಾಗಿರುವುದು ಮಕ್ಕಳಿಗೂ, ಪೋಷಕರಿಗೂ ಖುಷಿಯಾಗಿದೆ. ಒಪ್ಪಿಗೆ ಪತ್ರ ಬರೆದುಕೊಟ್ಟು ಮಕ್ಕಳನ್ನು ಶಾಲೆಗೆ ಕರೆತಂದಿದ್ದೇನೆ. ಈಗ ಕೊರೊನಾ ಭಯ ಇಲ್ಲ ಎಂದು ಪೋಷಕರಾದ ಶೈಲಾ ತಿಳಿಸಿದರು.

‘ಮಕ್ಕಳನ್ನು ಕರೆತಂದ ಪೋಷಕರು’

ಶಾಲಾರಂಭದ ಮೊದಲ ದಿನವಾದ ಸೋಮವಾರ ಹೆಚ್ಚಿನ ಪೋಷಕರು ಮಕ್ಕಳನ್ನು ಸ್ವತಃ ಶಾಲೆಗೆ ಕರೆತಂದು ಬಿಟ್ಟಿದ್ದು ಕಾಣುತ್ತಿತ್ತು. ಪೋಷಕರ ಮನಸ್ಸಿನಲ್ಲಿ ಕೊರೊನಾದ ಸಣ್ಣ ಆತಂಕ ಕಂಡುಬಂದರೂ, ಮಕ್ಕಳು ಮತ್ತೆ ಮುಂಚಿನಂತೆಯೇ ಶಾಲೆಗೆ ಹೋಗುವುದನ್ನು ಕಂಡು ಸಂಭ್ರಮಿಸಿದರು. ದಾರಿಯುದ್ದಕ್ಕೂ ಸುರಕ್ಷತೆಗೆಯ ಪಾಠ ಹೇಳಿಕೊಂಡು ಕರೆತಂದ ಪೋಷಕರು, ಕೊಠಡಿವರೆಗೂ ಮಕ್ಕಳನ್ನು ಕರೆದೊಯ್ದು ಶಿಕ್ಷಕರಿಗೊಪ್ಪಿಸಿ ಮರಳಿದರು. ಬಹುತೇಕ ಖಾಸಗಿ ಶಾಲೆಗಳ ಎದುರು ವಾಹನಗಳ ದಟ್ಟಣೆ ಕಂಡುಬಂತು. ಶಾಲಾ ಅಂಗಳದ ತುಂಬಾ ದ್ವಿಚಕ್ರ ಹಾಗೂ ಕಾರುಗಳು ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.