ADVERTISEMENT

ವಿಜ್ಞಾನ ದೇಶದ ಅಭಿವೃದ್ಧಿ ಹಿಂದಿನ ಶಕ್ತಿ: ರಾಜೇಂದ್ರ ಪಂದುಬೆಟ್ಟು

ಇನ್‌ಸ್ಪೈರ್ ಅವಾರ್ಡ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 13:08 IST
Last Updated 20 ಡಿಸೆಂಬರ್ 2018, 13:08 IST
ಇನ್‌ಸ್ಪೈರ್‌ ಅವಾರ್ಡ್‌ 2018 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಯಿತು.
ಇನ್‌ಸ್ಪೈರ್‌ ಅವಾರ್ಡ್‌ 2018 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಯಿತು.   

ಉಡುಪಿ: ಮನುಕುಲದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಗೆ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಜೇಂದ್ರ ಪಂದುಬೆಟ್ಟು ತಿಳಿಸಿದರು.

ಸೈಂಟ್ ಸಿಸಿಲಿಸ್‌ ಸಮೂಹ ಸಂಸ್ಥೆಯಲ್ಲಿ ರಾಜ್ಯ ಶಿಕ್ಷಣ ಸಂಶೋದನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ಇನ್‌ಸ್ಪೈರ್ ಅವಾರ್ಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಗುಣಮಟ್ಟದ ವಿಜ್ಞಾನಿಗಳನ್ನು ರೂಪಿಸುವಲ್ಲಿ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮ ಸಹಕಾರಿ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ನಿರ್ಧಿಷ್ಟ ವಿಷಯಗಳತ್ತ ಕುತೂಹಲ ಬೆಳೆಸಿಕೊಳ್ಳಬೇಕು. ಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಸ್ವಯಂ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ಅತ್ಯುತ್ತಮ ವಿಜ್ಞಾನಿಗಳಾಗಿ ಬೆಳೆಯಬೇಕು ಎಂದರು.

ADVERTISEMENT

ವಿಜ್ಞಾನ ವಿಷಯದ ವಿದ್ಯಾರ್ಥಿಗಳು ವಿಜ್ಞಾನ ಜ್ಞಾನವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಜಿಲ್ಲೆಯ ಹಲವು ವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ್ದಾರೆ. ಅಂತೆಯೇ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ವಿಜ್ಞಾನಿಗಳು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್ಮಾತನಾಡಿ, ಕಳೆದ ಬಾರಿಯ ಇನ್‌ಸ್ಪೈರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಈ ಬಾರಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅವರಲ್ಲಿ 225 ವಿದ್ಯಾರ್ಥಿಗಳ ವೈಜ್ಞಾನಿಕ ಮಾದರಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಭಾಗ್ಯಲಕ್ಷ್ಮಿ ಮಾತನಾಡಿ, ಇನ್‌ಸ್ಪೈರ್ ಅವಾರ್ಡ್ ಯೋಜನೆಗಾಗಿ ಮಾದರಿಗಳನ್ನು ಸಿದ್ದಪಡಿಸಲು ಜಿಲ್ಲೆಯಿಂದ 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಆಯ್ಕೆಯಾದ 225 ವಿದ್ಯಾರ್ಥಿಗಳ ಯೋಜನೆಗೆ ಕೇಂದ್ರ ಸರ್ಕಾರ ತಲಾ ₹ 10,000 ಬಿಡುಗಡೆಗೊಳಿಸಿದೆ. ಆ ಹಣದಿಂದ ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ದಪಡಿಸಿದ್ದು, ಜಿಲ್ಲೆಯಲ್ಲಿ ಶೇ 10ರಷ್ಟು ಮಾದರಿಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶೇ 10ರಷ್ಟು ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಸೈಂಟ್ ಸಿಸಿಲಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಮೇಝಿ , ಮುಖ್ಯೋಪಾಧ್ಯಾಯನಿ ಪ್ರೀತಿ ಕ್ರಾಸ್ತಾ, ಉಡುಪಿ ಬಿಇೊ ಉಮಾ, ಬ್ರಹ್ಮಾವರ ಬಿಇಒ ಆನಂದ್ ಉಪಸ್ಥಿತರಿದ್ದರು.

ಡಯಟ್‌ನ ಉಪ ಪ್ರಾಂಶುಪಾಲ ಚಂದ್ರಶೇಖರ್ ವಂದಿಸಿದರು, ಚಂದ್ರ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.