ADVERTISEMENT

ಕಡಲ್ಕೊರೆತ: ಎರಡು ಮಾದರಿ ಯೋಜನೆ ಸಿದ್ಧ- ಸಚಿವ ಎಸ್. ಅಂಗಾರ

ಕೋಡಿ, ಕೋಟ ಕಡಲ್ಕೊರೆತ ಸ್ಥಳಗಳಿಗೆ ಮೀನುಗಾರಿಕಾ ಸಚಿವ ಅಂಗಾರ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:03 IST
Last Updated 11 ಆಗಸ್ಟ್ 2022, 4:03 IST
ಕೋಟ ಗ್ರಾಮ ಪಂಚಾಯಿತಿ ಮತ್ತು ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಕೋಟ ಗ್ರಾಮ ಪಂಚಾಯಿತಿ ಮತ್ತು ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.   

ಕೋಟ(ಬ್ರಹ್ಮಾವರ): ಕೋಟ ಗ್ರಾಮ ಪಂಚಾಯಿತಿ ಮತ್ತು ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸಚಿವರು, ‘ಕಡಲ್ಕೊರೆತಕ್ಕೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು ಎರಡು ರೀತಿಯ ಯೋಜನೆಗಳನ್ನು ಸಿದ್ಧಪಡಿಸಿದೆ. ಮಂಗಳೂರಿನ ಉಳ್ಳಾಲದಲ್ಲಿ ಅತಿಹೆಚ್ಚು ಕಡಲ್ಕೊರೆತ ಆಗಿರುವ ಭಾಗದಲ್ಲಿ ಸೀ ವಾಕರ್ ಅನುಷ್ಠಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಇದಕ್ಕೆ ಅನುಮೋದನೆ ನೀಡಿದ್ದು, ಈ ಸಂಬಂಧ ಅಧ್ಯಯನಕ್ಕೆ ಇಲಾಖೆ ಪ್ರತಿನಿಧಿಗಳನ್ನು ಮುಂಬೈಗೆ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ವರದಿ ಕೈ ಸೇರಲಿದೆ‘ ಎಂದರು.

ಅದರಂತೆ ಟೆಂಡರ್ ಪ್ರಕ್ರಿಯೆ ಮೂಲಕ ಶ್ವಾಶತ ಕಾಮಗಾರಿಗೆ ಚಾಲನೆ ನೀಡಲಾಗುವುದು. ಉಡುಪಿ ಜಿಲ್ಲೆಯ ಮರವಂತೆ ಕಡಲ ಕಿನಾರೆಗೆ ಡಕ್‌ಫುಟ್‌ ಯೋಜನೆ ಕಾರ್ಯಗತಗೊಳಿಸಿ, ಯಾವ ಯೋಜನೆ ಯಶಸ್ವಿಯಾಗುತ್ತದೆ ನೋಡಿಕೊಂಡು ಅದನ್ನು ಕಡಲ್ಕೊರೆತ ಸ್ಥಳಗಳಲ್ಲಿ ಜಾರಿಗೆ ತರಲಾಗುವುದು ಎಂದರು.

ADVERTISEMENT

ಈ ಯೋಜನೆಗಳಿಗೆ ಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲಿದ್ದು, ಇನ್ನುಳಿದಂತೆ ಕೇಂದ್ರ ಸರ್ಕಾರದ ಬಂದರು ಹಾಗೂ ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಮನವರಿಕೆ ಮಾಡಲಾಗುವುದು. ಮುಖ್ಯಮಂತ್ರಿ, ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ, ಹೆಚ್ಚು ಅನುದಾನ ತರಲು ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಬಂದರು ಪ್ರದೇಶದಲ್ಲಿ ಜಟ್ಟಿ ನಿರ್ಮಾಣ, ಡ್ರಜ್ಜಿಂಗ್ ಮಾಡುವ ಜತೆಗೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಪ್ರಸ್ತುತ ಹೆಚ್ಚು ಕಡಲ್ಕೊರೆತ ಆಗುವ ಸ್ಥಳಗಳನ್ನು ಅವಲೋಕಿಸಿ ತಾತ್ಕಾಲಿಕ ಕಲ್ಲು
ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

ಮೀನುಗಾರಿಕಾ ಸಾಲಮನ್ನಾ ಯೋಜನೆ ಸಮರ್ಪಕ ಅನುಷ್ಠಾನ ಕುರಿತಂತೆ ಸಾಲಮನ್ನಾ ಯೋಜನೆಯ ಲಾಭವನ್ನು ಹೆಚ್ಚಿನವರು ಪಡೆದಿದ್ದಾರೆ. ಕೆಲವು ಫಲಾನುಭವಿಗಳಿಗೆ ತಾಂತ್ರಿಕ ಸಮಸ್ಯೆಯಿಂದ ಅಥವಾ ಇಲಾಖಾ ಮಟ್ಟದ ಲೋಪಗಳಿಂದ ವಿಳಂಬವಾಗಿದೆ. ಅದರ ಕುರಿತು ಮೀನುಗಾರಿಕಾ ಇಲಾಖಾ ಕಾರ್ಯದರ್ಶಿಗೆ ಮಾಹಿತಿ ನೀಡಿ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು. ಕೋಡಿ ಭಾಗದ ಬಹುಬೇಡಿಕೆಯ ಹಕ್ಕುಪತ್ರ ಕುರಿತಂತೆ ಸಿಆರ್‌ಝಡ್ ಹಾಗೂ ಕಂದಾಯ ಇಲಾಖೆ ನಡುವೆ ಗೊಂದಲಗಳಿವೆ. ಅದನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉದಯ್ ಕುಮಾರ್, ಉದ್ಯಮಿ ಆನಂದ ಸಿ. ಕುಂದರ್, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಸುರೇಶ್ ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.