ADVERTISEMENT

ಬೈಂದೂರು ಉತ್ಸವ ಜ. 24ರಿಂದ: ಶಾಸಕ ಗುರುರಾಜ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:30 IST
Last Updated 22 ಜನವರಿ 2026, 6:30 IST
ಶಾಸಕ ಗುರುರಾಜ ಗಂಟಿಹೊಳೆ ಬೈಂದೂರು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು
ಶಾಸಕ ಗುರುರಾಜ ಗಂಟಿಹೊಳೆ ಬೈಂದೂರು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು   

ಬೈಂದೂರು: ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜ. 24ರಿಂದ 26ರವರೆಗೆ ವಿಜೃಂಭಣೆಯಿಂದ ಎರಡನೇ ವರ್ಷದ ಬೈಂದೂರು ಉತ್ಸವ ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನೋಪಯೋಗಿ ಕಾರ್ಯಕ್ರಮಗಳ ಕಲ್ಪನೆ ಇಟ್ಟುಕೊಂಡು ನಡೆಸಿದ 43 ಗ್ರಾಮೋತ್ಸವಗಳು ಜಿಲ್ಲಾಡಳಿತದ ಸಹಕಾರದಿಂದ ಯಶಸ್ವಿಯಾಗಿದೆ. ಗ್ರಾಮೋತ್ಸವದಲ್ಲಿ 48 ಸಾವಿರ ಜನ ಭಾಗವಹಿಸಿ ವಿವಿಧ ಆರೋಗ್ಯ ಪರೀಕ್ಷೆ ಮಾಡಿಕೊಂಡು ಪ್ರಯೋಜನ ಪಡೆದರು. ಗ್ರಾಮೋತ್ಸವದಿಂದ ಸಂಜೀವಿನಿ ಸಂಘಕ್ಕೆ ಬೆಂಬಲ ದೊರಕಿತು. 13 ಗ್ರಾಮಗಳು ಕೇಂದ್ರ ಸರಕಾರದ ಸ್ಮಾರ್ಟ್‌ ವಿಲೇಜ್‌ ವಿಭಾಗಕ್ಕೆ ಆಯ್ಕೆಯಾಗಿವೆ ಎಂದರು.

ಮೂರು ದಿನಗಳ ಬೈಂದೂರು ಉತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್‌ ಕುಮಾ‌ರ್ ಕೊಡ್ಗಿ, ಎಂ.ಆರ್.ಜಿ. ಗ್ರೂಪ್‌ ಚೇರ್ಮನ್ ಕೆ. ಪ್ರಕಾಶ್‌ ಶೆಟ್ಟಿ, ಸೀತಾರಾಮ ಶೆಟ್ಟಿ, ಕೃಷ್ಣಮೂರ್ತಿ ಮಂಜರು, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.‌ ರಾಜೇಂದ್ರ ಕುಮಾರ್‌, ಉತ್ಸವ ಸಮಿತಿಯ ಎಚ್.ಎಸ್.‌ಶೆಟ್ಟಿ, ಟಿ. ಶಿವಾನಂದ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಮುಂಬೈ ಅರ್ಜುನ್‌ ಹಾಸ್ಪಿಟಾಲಿಟಿಯ ಅಶೋಕ್‌ ಶಟ್ಟಿ ಬೆಳ್ಳಾಡಿ, ಚಿತ್ರರಂಗದ ರಿಷಭ್ ಶೆಟ್ಟಿ, ಶನೀಲ್‌ ಗೌತಮ್‌, ರಾಜ್‌ ಬಿ. ಶೆಟ್ಟಿ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ ಗಾಣಿಗ, ಅನಿತಾ ಆರ್‌.ಕೆ, ಜಯಾನಂದ ಹೋಬಳಿದಾರ್‌, ಸುರೇಶ ಬಟವಾಡಿ, ರಾಜಶೇಖರ ದೇವಾಡಿಗ, ಪ್ರದೀಪ್‌ಕುಮಾರ್‌ ಶೆಟ್ಟಿ ಭಾಗವಹಿಸಿದ್ದರು. ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುರಾಜ ಗಂಟಿಹೊಳೆ ಬಿಡುಗಡೆಗೊಳಿಸಿದರು.

ಉತ್ಸವದಲ್ಲಿ ಕಾರ್ಯಕ್ರಮ ವೈವಿಧ್ಯ

ವಿಶೇಷ ಆಕರ್ಷಣೆಯಾಗಿ ಕಳರಿ ಬೆಂಕಿಯಾಟ ವಿವಿಧ ಗೋಷ್ಠಿಗಳು ಪುಸ್ತಕ ಸಂತೆ ಕಾರ್ಟೂನ್ ಹಬ್ಬ ಚೆಂಡೆ ಡೋಲು ವಾದನ ಕೀಲುಕುದುರೆ ಹೋಳಿ ಕುಣಿತ ಭಜನೆ ಟ್ಯಾಲೆಂಟ್ ಬೈಂದೂರು ಹುಲಿ ಹೆಜ್ಜೆ ಅಮ್ಯೂಸ್‌ಮೆಂಟ್ ಪಾರ್ಕ್ ವಾರ್‌ಷಿಪ್ ಇಲ್ಕಾಣಿ ಬೈಂದೂರು ಬಾಯಿ ಪಟಾಕಿ ಹೆಬ್ಬಾಗಿಲು ಮನೆ ಬೈಂದೂರಿನ ದೇಗುಲಗಳ ಪ್ರತಿರೂಪ ಭಜನಾ ಕುಣಿತ ಕರುಗಳ ಪ್ರದರ್ಶನ ಜಾನುವಾರು ಪ್ರದರ್ಶನ ಕಂಬಳ ಇರಲಿವೆ. ಸಾಂಸ್ಕೃತಿಕ ಆಕರ್ಷಣೆಯಾಗಿ ನೃತ್ಯ ನಾಟಕ ಭಕ್ತಿ ಸಂಭ್ರಮ ಸ್ವರ ಸಂಜೆ ಹಳೆಯ ಹಾಡುಗಳು ಜಾದೂ ಲೋಕ ಆಳ್ವಾಸ್ ಸಾಂಸ್ಕೃತಿಕ ವೈಭವ ಗಾನ ನಾಟ್ಯ ವೈಭವ ನಗೆ ಹಬ್ಬ ಟೀಮ್‌ ಸವಾರಿಯ ಲೈವ್‌ ದಿ ಬ್ಯಾಂಡ್‌ ರಿಯಾಲಿಟಿ ಶೋ ಕಲಾವಿದರಿಂದ ಲೈವ್ ಸಂಗೀತ ಹಬ್ಬ ಇರಲಿವೆ. ಕೃಷಿ ಮೇಳ ಮೀನುಗಾರಿಕಾ ಮೇಳ ಸಂಜೀವಿನಿ ಮೇಳ ಅರಣ್ಯ ಜಾಂಬೂರಿ ಆರೋಗ್ಯ ಮೇಳ ಸಾಹಿತ್ಯ ಮೇಳ ತೋಟಗಾರಿಕಾ ಮೇಳ ವಿಜ್ಞಾನ ಮೇಳ ಆಹಾರ ಮೇಳ ಕೈಗಾರಿಕಾ ಮೇಳ ಪ್ರಾಚ್ಯವಸ್ತು ಮೇಳ ಕರಕುಶಲ ಮೇಳ ಶಸ್ತ್ರ ಮತ್ತು ಶಾಸ್ತ್ರ ಮೇಳ ಬೀಚ್‌ ಉತ್ಸವ ಉದ್ಯೋಗ ಮೇಳ ಸ್ಕೂಬಾ ಡೈವಿಂಗ್‌ ಚಿತ್ರಕಲಾ ಪ್ರದರ್ಶನ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.