ADVERTISEMENT

ಉಡುಪಿ | ಸರ್ವಿಸ್‌ ರಸ್ತೆ ಅವ್ಯವಸ್ಥೆ: ಸುಸ್ತಾದ ಜನರು

ರಸ್ತೆಗಳಲ್ಲೇ ವಾಹನ ನಿಲುಗಡೆ: ಏಕಮುಖ ಸಂಚಾರ ಸೂಚನೆ ಪಾಲಿಸದ ವಾಹನ ಚಾಲಕರು

ನವೀನ ಕುಮಾರ್ ಜಿ.
Published 13 ಜನವರಿ 2025, 5:49 IST
Last Updated 13 ಜನವರಿ 2025, 5:49 IST
ಸಂತೆಕಟ್ಟೆಯಲ್ಲಿ ವಾಹನಗಳು ಸಂಚರಿಸುವ ಸರ್ವಿಸ್‌ ರಸ್ತೆಯ ಮಧ್ಯದಲ್ಲಿ ಹೊಂಡ ಬಿದ್ದಿರುವುದು   ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಸಂತೆಕಟ್ಟೆಯಲ್ಲಿ ವಾಹನಗಳು ಸಂಚರಿಸುವ ಸರ್ವಿಸ್‌ ರಸ್ತೆಯ ಮಧ್ಯದಲ್ಲಿ ಹೊಂಡ ಬಿದ್ದಿರುವುದು   ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಒಂದೆಡೆ ಮುಗಿಯದ ರಸ್ತೆ ಕಾಮಗಾರಿಗಳು, ಇನ್ನೊಂದೆಡೆ ವಾಹನಗಳ ದಟ್ಟಣೆ, ಇವುಗಳ ಮಧ್ಯೆ ವಾಹನ ಸವಾರರು ಸರ್ವಿಸ್ ರಸ್ತೆಗಳಲ್ಲೇ ಪರದಾಡುವ ಪರಿಸ್ಥಿತಿ ನಗರದಲ್ಲಿದೆ.

ನಗರದಲ್ಲಷ್ಟೇ ಅಲ್ಲ ಜಿಲ್ಲೆಯ ವಿವಿಧೆಡೆಯ ಸರ್ವಿಸ್‌ ರಸ್ತೆಗಳಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇವೆ. ಉಡುಪಿ ನಗರದ ವಿವಿಧೆಡೆ ಏಕಕಾಲಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸರ್ವಿಸ್‌ ರಸ್ತೆಯಲ್ಲಿನ ಸಂಚಾರ ವಾಹನ ಸವಾರರಿಗೆ ಅನಿವಾರ್ಯವಾಗಿದೆ.

ಈ ಸರ್ವಿಸ್‌ ರಸ್ತೆಗಳ ಅವ್ಯವಸ್ಥೆಯಿಂದ ದಿನನಿತ್ಯ ವಾಹನ ಸವಾರರ ಸಂಕಟ ಹೇಳತೀರದು. ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದ ಸಂತೆಕಟ್ಟೆ ವೆಹಿಕ್ಯುಲರ್‌ ಓವರ್‌ಪಾಸ್‌ನ ಕಾಮಗಾರಿ ಸದ್ಯ ಚುರುಕುಗೊಂಡಿದ್ದು, ಕುಂದಾಪುರಕ್ಕೆ ಹೋಗುವ ಮೇಲ್ಭಾಗದ ಸರ್ವಿಸ್‌ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ADVERTISEMENT

ಸಂತೆಕಟ್ಟೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ವಿಸ್‌ ರಸ್ತೆಗೆ ಸಮರ್ಪಕವಾಗಿ ಡಾಂಬರು ಹಾಕದ ಕಾರಣ ಸಂಚಾರಕ್ಕೆ ಪ್ರಯಾಸ ಪಡಬೇಕಾಗಿದೆ ಎಂಬುದು ವಾಹನ ಸವಾರರ ಅಳಲಾಗಿದೆ.

ನಗರದ ಕರಾವಳಿ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆಯ ಅವ್ಯವಸ್ಥೆ ಹೇಳತೀರದಾಗಿದೆ. ಬನ್ನಂಜೆ ಕಡೆಯ ರಸ್ತೆ ಸೇರುವಲ್ಲಿ ಮಳೆಗಾಲದಲ್ಲಿ ಸರ್ವಿಸ್‌ ರಸ್ತೆ ಕೆರೆಯಂತಾಗುತ್ತದೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯಕಾರಣ ಎನ್ನುತ್ತಾರೆ ವಾಹನ ಚಾಲಕರು.

ಇದೀಗ ಮಲ್ಪೆ ಕಡೆಗೆ ಹೋಗುವ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಕರಾವಳಿ ಜಂಕ್ಷನ್‌ ಬಳಿ ಆಗಾಗ ವಾಹನ ದಟ್ಟಣೆ ಕಂಡು ಬರುತ್ತದೆ.

ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್‌ ವರೆಗಿನ ಸರ್ವಿಸ್‌ ರಸ್ತೆಯಲ್ಲೇ ಹೆದ್ದಾರಿಯ ವಾಹನಗಳು ಸಂಚರಿಸುತ್ತಿವೆ.

ಈ ಸರ್ವಿಸ್‌ ರಸ್ತೆಗಳು ಅಗಲ ಕಿರಿದಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಅಂಬಲಪಾಡಿ ಬೈಪಾಸ್‌ನ ಇಕ್ಕೆಲಗಳಲ್ಲಿರುವ ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರ ಮಾಡಲಾಗಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ. ದ್ವಿಚಕ್ರ ವಾಹನಗಳು, ರಿಕ್ಷಾ, ಕಾರುಗಳು ಸರ್ವಿಸ್‌ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಿಂದ ಸಂಚರಿಸುವ ಮೂಲಕ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಅಂಬಲಪಾಡಿ ಸರ್ವಿಸ್‌ ರಸ್ತೆಗಳಲ್ಲಿ ಎರಡೂ ಕಡೆಗಳಿಂದ ವಾಹನಗಳು ಸಂಚರಿಸಿದರೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಅಂಬಲಪಾಡಿಯಲ್ಲಿ ಪೊಲೀಸರನ್ನು ಕೂಡ ನಿಯೋಜಿಸಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

‘ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸುವ ಮೊದಲು ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಈಗ ಯಾರೂ ಕಂಡು ಬರುವುದಿಲ್ಲ. ಕರಾವಳಿ ಬೈಪಾಸ್‌ನಲ್ಲಿ ಕೆಲವೊಮ್ಮೆ ಪೊಲೀಸರು ಕಾರ್ಯನಿರ್ವಹಿಸಿದರೂ ಸರ್ವಿಸ್‌ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಿಂದ ಸಂಚರಿಸುವವರನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.

ಕಿನ್ನಿಮುಲ್ಕಿಯಿಂದ ಅಂಬಲಪಾಡಿ ಕಡೆಗೆ ಹೋಗುವ ಸರ್ವಿಸ್‌ ರಸ್ತೆಯ ಪಕ್ಕದ ಗ್ಯಾರೇಜ್‌ಗಳ ಮುಂಭಾಗದಲ್ಲಿ ಈಗಲೂ ಕಾರು, ಟೆಂಪೊಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಅಪಾಯ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.

ನಗರದ ಎಲ್ಲಾ ಕಡೆ ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಸರ್ವಿಸ್‌ ರಸ್ತೆಗಳಲ್ಲಿ ಘನವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು ಅವುಗಳ ವೇಗಕ್ಕೆ ಕಡಿವಾಣ ಹಾಕಬೇಕು.
–ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ
ಏಕಮುಖ ಸಂಚಾರವಿದ್ದರೂ ಎರಡೂ ಬದಿಯಿಂದ ವಾಹನಗಳು ಸಂಚರಿಸುತ್ತಿರುವುದರಿಂದ ಅಂಬಲಪಾಡಿ ಬಳಿಯ ಸರ್ವಿಸ್‌ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ.
–ಸುನಿಲ್‌, ಕಿದಿಯೂರು ನಿವಾಸಿ

‘ಡಿ.ಸಿ. ಎಸ್‌ಪಿ ಜೊತೆ ಮಾತುಕತೆ’

ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಅಲ್ಲಿನ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್‌ ರಸ್ತೆಗಳ ಅವ್ಯವಸ್ಥೆ ಪರಿಹರಿಸುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಶೀಘ್ರ ಮಾತುಕತೆ ನಡೆಸುತ್ತೇನೆ. ಸಂತೆಕಟ್ಟೆಯಲ್ಲಿ ಈಗಾಗಲೇ ಕುಂದಾಪುರ ಕಡೆ ಹೋಗುವ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜನವರಿ 31ರೊಳಗೆ ಕಾಮಗಾರಿ ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಸಮಯದೊಳಗೆ ಪೂರ್ಣಗೊಳಿಸದ ಕಾರಣ ಅಂತಿಮ ಹಂತದ ಕಾಮಗಾರಿಯನ್ನು ಎರವಲು ಏಜೆನ್ಸಿಗೆ ನೀಡುವ ಕುರಿತೂ ಚಿಂತನೆ ನಡೆಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಸರ್ವಿಸ್‌ ರಸ್ತೆ ವಿಸ್ತರಣೆ ಮಾಡಿ’

ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್‌ನಲ್ಲಿ ಅಗಲ ಕಿರಿದಾದ ಸರ್ವಿಸ್‌ ರಸ್ತೆಯಿಂದಾಗಿ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೆದ್ದಾರಿ ಪ್ರಾಧಿಕಾರವು ಭೂಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಮತ್ತು ಸರ್ವಿಸ್‌ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಸರ್ವಿಸ್‌ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರನ್ನು ತಡೆಯಲು ಅಂಬಲಪಾಡಿ ಜಂಕ್ಷನ್‌ನಲ್ಲಿ ಪೊಲೀಸರನ್ನು ನಿಯೋಜಿಸಬೇಕು ಮತ್ತು ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ ಶೆಟ್ಟಿ.

‘ಸಮರ್ಪಕ ಸರ್ವಿಸ್‌ ರಸ್ತೆ ನಿರ್ಮಿಸಿ’

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಪಡುಬಿದ್ರಿ ಎರ್ಮಾಳು ಉಚ್ಚಿಲ ಮೂಳೂರು ಕಾಪು ಉಳಿಯರಗೋಳಿ ಪರಿಸರದಲ್ಲಿ ಸರ್ವಿಸ್‌ ರಸ್ತೆಗಳಿಲ್ಲದೆ‌ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ‌ಹೆಜಮಾಡಿಯ ಕನ್ನಂಗಾರ್‌ ಬೈಪಾಸ್‌ನಿಂದ ಪಡುಬಿದ್ರಿ ಕನ್ನಂಗಾರ್ ಗರೋಡಿಯವರೆಗೆ ಸರ್ವಿಸ್‌ ರಸ್ತೆ ಇಲ್ಲದೆ‌ ಹೆಜಮಾಡಿ ಪೇಟೆಗೆ ಸಂಚರಿಸುವ‌‌ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿವೆ. ಈ ಭಾಗದಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ಪಡುಬಿದ್ರಿ ಬಂಟರ ಭವನದಿಂದ‌ ನಗರಾಜ್‌‌ ಎಸ್ಟೇಟ್‌ವರೆಗೆ ಎರ್ಮಾಳು ಬಡಾದಲ್ಲಿ ಕಾಪು‌ ಕೊಪ್ಪಲಂಗಡಿ‌ ಪ್ರದೇಶದಲ್ಲಿ‌ ಸರ್ವಿಸ್ ರಸ್ತೆಗೆ ಬೇಡಿಕೆ‌ ಇದ್ದರೂ ಅದು ಈವರೆಗೆ ಸಾಕಾರವಾಗಿಲ್ಲ.

‘ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿ’

ಕಾರ್ಕಳ: ತಾಲ್ಲೂಕಿನ ಸಾಣೂರು ಯುವಕ ಮಂಡಲದ ಮೈದಾನದಿಂದ ಮುರತಂಗಡಿ ತನಕ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ 2.4 ಕಿ.ಮೀ. ಉದ್ದಕ್ಕೆ ಈಗಾಗಲೇ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಸಾಣೂರು ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಸಾಣೂರು ಸೇತುವೆ ದಾಟಿ ಪೇಟೆ ತನಕದ ರಸ್ತೆಯನ್ನು ಹೆದ್ದಾರಿ ಕಾಮಗಾರಿಯಲ್ಲಿ ಸೇರಿಸಿಲ್ಲ. ಸಾಣೂರು ಗ್ರಾಮದ ಇಕ್ಕೆಲಗಳಲ್ಲಿ ಅಡ್ಡರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವಾಗ ಸರ್ವಿಸ್ ರಸ್ತೆ ಇಲ್ಲದಿದ್ದರೆ ಆತಂಕದ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ವಿಸ್ ರಸ್ತೆ ನಿರ್ಮಿಸಲು ಪ್ರಸ್ತಾವನೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.

‘ವಾಹನ ನಿಲುಗಡೆಯ ತಾಣವಾದ ಸರ್ವಿಸ್‌ ರಸ್ತೆ’

ಬೈಂದೂರು: ತಾಲ್ಲೂಕಿನ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ರಸ್ತೆ ಎಲ್ಲೆಲ್ಲಿ ಇದೆಯೋ ಅಲ್ಲಿ ಮಾತ್ರ ಸರ್ವಿಸ್ ರಸ್ತೆ ಇದ್ದು ಅಗತ್ಯವಿರುವ ಪ್ರಮುಖ ಪಟ್ಟಣಗಳಲ್ಲೇ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ. ಬೈಂದೂರು ಪಟ್ಟಣದಲ್ಲಿ ಹೊಸ ಬಸ್ ನಿಲ್ದಾಣದಿಂದ ನಾಕಟ್ಟೆವರೆಗೆ ಮಾತ್ರ ಸರ್ವಿಸ್ ರಸ್ತೆ ಇದ್ದು ಅದನ್ನು ರಾಹುತನಕಟ್ಟೆವರೆಗೂ ವಿಸ್ತರಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ತಡೆ ಉಂಟಾಗುತ್ತಿದೆ. ಶಂಕರ ಚಿತ್ರಮಂದಿರದಿಂದ ಆಂಜನೇಯ ದೇವಸ್ಥಾನದವರೆಗೆ ದ್ವಿಚಕ್ರ ವಾಹನ ಮತ್ತು ಗೂಡ್ಸ್ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಸಂಜೆಯ ವೇಳೆ ಬೆಂಗಳೂರಿಗೆ ತೆರಳುವ ಖಾಸಗಿ ಬಸ್‌ಗಳು ಮೆಸ್ಕಾಂ ಕಚೇರಿಯ ಎದುರು ಸಾಲು ಸಾಲಾಗಿ ನಿಂತು ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಪೂರಕ ಮಾಹಿತಿ: ಹಮೀದ್ ಪಡುಬಿದ್ರಿ, ವಾಸುದೇವ ಭಟ್‌, ವಿಶ್ವನಾಥ ಆಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.