ADVERTISEMENT

ಶಂಕರಪುರ ಮಲ್ಲಿಗೆ: ರೈತರಿಗೆ ಬೆಲೆ ಸ್ಥಿರತೆಯ ಸವಾಲು

ನವೀನ್‌ಕುಮಾರ್‌ ಜಿ.
Published 10 ಮೇ 2025, 18:28 IST
Last Updated 10 ಮೇ 2025, 18:28 IST
ಶಂಕರಪುರ ಮಲ್ಲಿಗೆ
ಶಂಕರಪುರ ಮಲ್ಲಿಗೆ   

ಉಡುಪಿ: ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಶಂಕರಪುರ ಮಲ್ಲಿಗೆಯ ಇಳುವರಿ ಕುಸಿದಿಲ್ಲ. ಆದರೆ, ದರ ಏರಿಳಿತದಿಂದಾಗಿ ಕೃಷಿಕರು ಸವಾಲು ಎದುರಿಸುವಂತಾಗಿದೆ.

ಮೇ 7ರಂದು ಒಂದು ಅಟ್ಟಿ ಮಲ್ಲಿಗೆಯ ದರ ₹370 ಇತ್ತು. ಶುಕ್ರವಾರ ₹570 ಇದ್ದರೆ, ಶನಿವಾರ ₹750ಕ್ಕೆ ಮುಟ್ಟಿದೆ. 

ಕರಾವಳಿ ಭಾಗದಲ್ಲಿ ಬಾಳೆ ದಿಂಡಿನ ನಾರು ಬಳಸಿ ಮೊಗ್ಗು ಕಟ್ಟಲಾಗುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಚೆಂಡು ಸೇರಿಸಿದರೆ ಒಂದು ಅಟ್ಟಿ ಆಗುತ್ತದೆ.

ADVERTISEMENT

ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಮತ್ತು ಭೂತಕೋಲ ಕಾರ್ಯಕ್ರಮಗಳು ಇರುವ ಕಾರಣ ಶಂಕರಪುರ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ, ಬೆಲೆಯಲ್ಲಿ ಸ್ಥಿರತೆ ಇಲ್ಲದ ಕಾರಣ ಶ್ರಮವಹಿಸಿ ಮಲ್ಲಿಗೆ ಬೆಳೆಯುವ ಕೃಷಿಕರು, ನಿರಾಸೆ ಅನುಭವಿಸುವಂತಾಗಿದೆ.

ಮಧ್ಯವರ್ತಿಗಳೇ ಬೆಲೆ ನಿಗದಿಪಡಿಸುವುದರಿಂದ ನಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ ಎಂಬುದು ರೈತರ ಆರೋಪ.

ಜಿಲ್ಲೆಯ ಶಂಕರಪುರ ಪ್ರದೇಶದಲ್ಲಿ 500ಕ್ಕೂ ಹೆಚ್ಚು ರೈತರು ಮಲ್ಲಿಗೆ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಈ ಮಲ್ಲಿಗೆಗೆ ಕರಾವಳಿಯಲ್ಲಷ್ಟೇ ಅಲ್ಲದೆ ಮುಂಬೈನಲ್ಲೂ ಹೆಚ್ಚಿನ ಬೇಡಿಕೆಯಿದೆ. 

‘ಈ ಬಾರಿ ಇಳುವರಿ ಚೆನ್ನಾಗಿಯೇ ಬಂದಿದೆ. ಆದರೆ, ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಂಕಿ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಮಲ್ಲಿಗೆ ಗಿಡಗಳಿಗೆ ಸಿಂಪಡಿಸುವ ಕೀಟನಾಶಕಗಳ ದರವೂ ಗಗನಕ್ಕೇರಿದೆ’ ಎನ್ನುತ್ತಾರೆ ಕೃಷಿಕ ಮಾರ್ಕ್ ಡಿಸೋಜ.

‘ಬೇಸಿಗೆ ಅವಧಿಯಲ್ಲೇ ಹೆಚ್ಚು ಇಳುವರಿ ಸಿಗುತ್ತದೆ. ಆದರೆ, ಅಕಾಲಿಕ ಮಳೆ ಬಂದರೆ ಗಿಡಗಳಿಗೆ ಕೊಳೆ ರೋಗ ಬರುತ್ತದೆ. ‘ಉಡುಪಿ ಮಲ್ಲಿಗೆ’ ಆ್ಯಪ್ ಮೂಲಕವೇ ನಮಗೆ ಮಾರುಕಟ್ಟೆ ದರದ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದು ಹೇಳುತ್ತಾರೆ.

‘ಕೋವಿಡ್‌ಗಿಂತ ಮೊದಲು ವಿಮಾನದ ಮೂಲಕ ಮುಂಬೈಗೆ ಮಲ್ಲಿಗೆ ರವಾನಿಸುತ್ತಿದ್ದೆವು. ಆ ನಂತರ ವಿಮಾನದ ಸಮಯ ವ್ಯತ್ಯಾಸವಾಗಿರುವುದರಿಂದ ಈಗ ಬಸ್‌ ಮೂಲಕ ಕಳುಹಿಸುತ್ತಿದ್ಧೇವೆ’ ಎನ್ನುತ್ತಾರೆ ಮಾರಾಟಗಾರ ವಿನ್ಸೆಂಟ್ ರೋಡ್ರಿಗಸ್.

ವ್ಯಾಪಾರಿಯೊಬ್ಬರು ಶಂಕರಪುರ ಮಲ್ಲಿಗೆ ಮಾರಾಟ ಮಾಡುತ್ತಿದ್ದಾರೆ ಪ್ರಜಾವಾಣಿ ಚಿತ್ರ
ಶಂಕರಪುರ ಮಲ್ಲಿಗೆ ಗಿಡ

ಉದ್ಯೋಗ ಖಾತರಿ ಯೋಜನೆಯಡಿ 5 ಗುಂಟೆಯಿಂದ ಒಂದು ಎಕರೆವರೆಗೆ ಮಲ್ಲಿಗೆ ಗಿಡ ನೆಡಲು ನೆರವು ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ‍ಪಡೆದುಕೊಳ್ಳಬೇಕಿದೆ ಭುವನೇಶ್ವರಿ ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.