ADVERTISEMENT

ಶೆಟ್ರಕಟ್ಟೆ ಅಪಘಾತ ಪ್ರಕರಣ: ಕಂಡ್ಲೂರು ಪಿಎಸ್ಐ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:27 IST
Last Updated 8 ಜನವರಿ 2026, 2:27 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಕುಂದಾಪುರ: ನಿಯಮ ಮೀರಿ ಮಣ್ಣು ತುಂಬಿಸಿ ನಿರ್ಲಕ್ಷ್ಯದ ಸಾಗಾಟ ನಡೆಸಿ 14ಕ್ಕೂ ಹೆಚ್ಚು ಬಸ್ ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಲು ಕಾರಣವಾಗಿದ್ದ ಶೆಟ್ರಕಟ್ಟೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸಿರ್ ಹುಸೇನ್ ಅವರನ್ನು ಅಜೆಕಾರು ಪೊಲೀಸ್ ಠಾಣೆಗೆ ಅನ್ಯ ಕರ್ತವ್ಯದ ಮೇಲೆ ನಿಯೋಜನೆ ಮಾಡಿ ಎಸ್‌ಪಿ ಹರಿರಾಮ್ ಶಂಕರ್ ಮಂಗಳವಾರ ರಾತ್ರಿ ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಬೀಟ್ ಪೊಲೀಸ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ.

ADVERTISEMENT

ಗ್ರಾಮಾಂತರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಶಂಕರನಾರಾಯಣದ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಕಾಯ್ಕಿಣಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. 

ಸೋಮವಾರ ಸಂಜೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಕುಂದಾಪುರದಿಂದ ಆಜ್ರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಕೇರಳದ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. 

ಪ್ರಕರಣದ ಪ್ರಮುಖ ಆರೋಪಿ ಟಿಪ್ಪರ್ ಚಾಲಕ ಕೊಕ್ಕರ್ಣೆ ಕುದಿ ಗ್ರಾಮದ ನಿವಾಸಿ ರಾಘವೇಂದ್ರ ಸದ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಆತನ ಮೇಲೆ ನಿಗಾ ಇರಿಸಿದೆ. ಮಣ್ಣು ಸಾಗಾಟ ಗುತ್ತಿಗೆದಾರ ಬಳ್ಕೂರಿನ ಶ್ರೀಧರ್ ಅವರನ್ನು ಮಂಗಳವಾರ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಟಿಪ್ಪರ್ ಮಾಲಕಿ ಸುಮಾ ಅವರ ಮೇಲೂ ಪ್ರಕರಣ ದಾಖಲಾಗಿದೆ. ಮಣ್ಣಿನ ಜಾಗದ ಮಾಲೀಕರು ಸೇರಿದಂತೆ ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 

ಹಠಾತ್ ವರ್ಗಾವಣೆ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಬೈಂದೂರು, ಕುಂದಾಪುರ, ಕೊಲ್ಲೂರು, ಶಂಕರನಾರಾಯಣ ಮುಂತಾದ ಕಡೆ ಕರ್ತವ್ಯ ನಿರ್ವಹಿಸಿದ್ದ ಎಸ್ಐ ನಾಸಿರ್ ಹುಸೇನ್ ಇತ್ತೀಚೆಗಷ್ಟೇ ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾಗಿ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು. ಕೆಲವೇ ದಿನಗಳಲ್ಲಿ ಠಾಣೆಯ ಸ್ವರೂಪವನ್ನೇ ಬದಲಿಸಿದ್ದ ಅವರ ಕಾರ್ಯಶೈಲಿ ಬಗ್ಗೆ ಸಾರ್ವಜನಿಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಅವರ ಹಠಾತ್ ವರ್ಗಾವಣೆ ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.