
ಉಡುಪಿ: ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಪುರಪ್ರವೇಶ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಕಡಿಯಾಳಿಗೆ ತಲುಪಿದ ಶ್ರೀಗಳಿಗೆ ಆದ್ಧೂರಿ ಸ್ವಾಗತ ನೀಡಲಾಯಿತು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಶ್ರೀಪಾದರನ್ನು ಬರಮಾಡಿಕೊಂಡರು. ಇದೇ ವೇಳೆ ಶ್ರೀಗಳು ದೀಪ ಬೆಳಗುವ ಮೂಲಕ ಮೆರವಣಿಗೆಗೆ ಚಲನೆ ನೀಡಿದರು. ಬಳಿಕ ಮಯೂರಾಲಂಕೃತ ತೆರೆದ ವಾಹನದಲ್ಲಿ ವೇದವರ್ಧನ ಶ್ರೀಗಳನ್ನು ಮೆರವಣಿಗೆಯಲ್ಲಿ ಮಠಕ್ಕೆ ಕರೆದೊಯ್ಯಲಾಯಿತು.
ಶೀರೂರು ಮಠದ ಪಟ್ಟದೇವರಾದ ವಿಠಲ ದೇವರನ್ನು ಸುವರ್ಣ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ಶ್ರೀಪಾದರು ಚಂದ್ರಮೌಳೀಶ್ವರ, ಅನಂತೇಶ್ವರ ಹಾಗೂ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಬಳಿಕ ಶೀರೂರು ಮಠ ಪ್ರವೇಶಿಸಿದರು. ಸಾವಿರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪುರಪ್ರವೇಶ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಯಶ್‌ಪಾಲ್ ಸುವರ್ಣ, ಶೀರೂರು ಮಠದ ದಿವಾನ ಉದಯ ಕುಮಾರ್ ಸರಳತ್ತಾಯ, ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ಮಾಹೆ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಟ್ಟಾರು ರತ್ನಾಕರ ಹೆಗಡೆ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್ ಪಾಲ್ಗೊಂಡಿದ್ದರು.
ಗಮನ ಸೆಳೆದ ಕಲಾ ತಂಡಗಳು: ಯಕ್ಷಗಾನ ಗೊಂಬೆಗಳು, ಚೆಂಡೆಮೇಳ, ತಾಲೀಮು, ಸುಗ್ಗಿ ಕುಣಿತ, ಕುಣಿತ ಭಜನೆ ತಂಡಗಳು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಮೆರವಣಿಗೆಯನ್ನು ವೀಕ್ಷಿಸಿದರು.
ಕಡಿಯಾಳಿಯಿಂದ ಹೊರಟ ಮೆರವಣಿಗೆಯು ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ದಾರಿಯಾಗಿ ಸಂಸ್ಕೃತ ಕಾಲೇಜಿನ ಬಳಿಯಿಂದ ರಥಬೀದಿಯನ್ನು ಪ್ರವೇಶಿಸಿತು.
ಪುರಪ್ರವೇಶ ಮೆರವಣಿಗೆ ಕಾರಣ ನಗರದಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ವಿವಿಧೆಡೆ ವಾಹನ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.