ADVERTISEMENT

7ರಂದು ಶಿರೂರು ಪರ್ಯಾಯ ಪೂರ್ವಭಾವಿ ಸಭೆ: ಯಶ್‌ಪಾಲ್‌ ಸುವರ್ಣ

ಜಿಲ್ಲೆಯ ಪ್ರತಿ ಮನೆಗಳಿಗೂ ಆಮಂತ್ರಣ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:59 IST
Last Updated 5 ನವೆಂಬರ್ 2025, 5:59 IST
ಶಿರೂರು ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ಸಭೆ ಜರುಗಿತು
ಶಿರೂರು ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ಸಭೆ ಜರುಗಿತು   

ಉಡುಪಿ: ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಭೆ ನ. 7ರಂದು ಸಂಜೆ 4.30ಕ್ಕೆ ಉಡುಪಿಯ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಶಿರೂರು ಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಭಾವಿ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸುವರು ಎಂದು ತಿಳಿಸಿದರು.

ಪರ್ಯಾಯ ಮಹೋತ್ಸವದ ಬಗ್ಗೆ ಈಗಾಗಲೇ ಹೊರೆಕಾಣಿಕೆ, ಆರ್ಥಿಕ, ಪುರಪ್ರವೇಶ ಮತ್ತು ಇನ್ನಿತರ ಸಮಿತಿಗಳು ಜಂಟಿಯಾಗಿ ಸಭೆ ಸೇರಿ ಜನವರಿ 18ರಂದು ಬೆಳಗ್ಗಿನ ಜಾವ ನಡೆಯಲಿರುವ ಶೋಭಾಯಾತ್ರೆಯ ರೂಪರೇಷೆಯನ್ನು ನಿರ್ಧರಿಸಲಾಗಿದೆ ಎಂದರು.

ADVERTISEMENT

ಈ ಬಾರಿಯ ಶಿರೂರು ಪರ್ಯಾಯ ‘ನಮ್ಮ ಪರ್ಯಾಯ’ ಎಂಬ ಧ್ಯೇಯವಾಕ್ಯದೊಂದಿಗೆ ಉಡುಪಿ ಜಿಲ್ಲೆಯ ಪ್ರತಿ ಮನೆಗಳಿಗೂ ಆಮಂತ್ರಣ ಪತ್ರಿಕೆಗಳನ್ನು ಮತ್ತು ಮನವಿ ಮುಟ್ಟಿಸುವ ಉದ್ದೇಶವನ್ನು ಹೊಂದಿದ್ದು, ಆ ಮೂಲಕ ಜಿಲ್ಲೆಯ ಪ್ರತಿ ಮನೆಯವರು ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪರ್ಯಾಯದ ಸಂದರ್ಭದಲ್ಲಿ 10 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶ, ವಿದೇಶದ ಕಲಾವಿದರು ಭಾಗವಹಿಸುವರು ಎಂದರು.

ನಗರ ಸಭೆಯಿಂದ ₹50 ಲಕ್ಷ ವೆಚ್ಚದಲ್ಲಿ ನಗರಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು. ಪರ್ಯಾಯಕ್ಕೆ ಅನುದಾನ ಒದಗಿಸುವಂತೆ ಆಗ್ರಹಿಸಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅನುದಾನ ಲಭಿಸುವ ಭರವಸೆ ಇದೆ ಎಂದು ತಿಳಿಸಿದರು.

ಶಿರೂರು ಮಠದ ದಿವಾನ ಉದಯಕುಮಾರ್‌ ಸರಳತ್ತಾಯ ಮಾತನಾಡಿ, ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿದ್ದು, ಕೊನೆಯದಾದ ಧಾನ್ಯ ಮುಹೂರ್ತವು ಡಿಸೆಂಬರ್‌ 14ರಂದು ನಡೆಯಲಿದೆ ಎಂದು ಹೇಳಿದರು.

ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀಪಾದರು 2026ರ ಜನವರಿ 9ರಂದು ಪುರಪ್ರವೇಶ ಮಾಡಲಿದ್ದು, ಅಂದು ಸಂಜೆ 3.30ಕ್ಕೆ ಕಡಿಯಾಳಿಯಲ್ಲಿ ಅವರನ್ನು ಬರ ಮಾಡಿಕೊಳ್ಳಲಾಗುವುದು. ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ವಿವರಿಸಿದರು.

ಅಂದು ಉಡುಪಿ ನಗರಸಭೆಯ ವತಿಯಿಂದ ಪರ್ಯಾಯ ಶ್ರೀಗಳಿಗೆ ರಥಬೀದಿಯಲ್ಲಿ ಪೌರ ಸನ್ಮಾನ ನಡೆಯಲಿದೆ. ಜನವರಿ 10ರಿಂದ 17ರವರೆಗೆ ದಿನಂಪ್ರತಿ ಅದ್ದೂರಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್‌ ಶೆಟ್ಟಿ ಬೈಕಾಡಿ, ಕಿರಣ್‌ ಕುಮಾರ್‌ ಇದ್ದರು.

ಡಿ.ಸಿ. ಕಚೇರಿಯಲ್ಲಿ ಸಮಾಲೋಚನೆ ಸಭೆ

ಶಿರೂರು ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ಸಭೆ ಜರುಗಿತು. ಶಾಸಕ ಯಶ್‌ಪಾಲ್‌ ಸುವರ್ಣ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಮಠದ ದಿವಾನ ಉದಯ ಕುಮಾರ್ ಸರಳತ್ತಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.