ADVERTISEMENT

ಅಲೆವೂರು: ಶೀರೂರು ಶ್ರೀಪಾದರಿಗೆ ಸನ್ಮಾನ

ಶೀರೂರು ಪರ್ಯಾಯ: ತಳಿರು, ತೋರಣಗಳಿಂದ ಕಂಗೊಳಿಸುತ್ತಿದೆ ನಗರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:26 IST
Last Updated 14 ಜನವರಿ 2026, 6:26 IST
ಶೀರೂರು ಶ್ರೀಗಳಿಗೆ ಅಲೆವೂರಿನಲ್ಲಿ ಸನ್ಮಾನ ನಡೆಯಿತು
ಶೀರೂರು ಶ್ರೀಗಳಿಗೆ ಅಲೆವೂರಿನಲ್ಲಿ ಸನ್ಮಾನ ನಡೆಯಿತು   

ಉಡುಪಿ: ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ವೇದವರ್ಧನ ತೀರ್ಥ ಶ್ರೀಪಾದರಿಗೆ ಮಂಗಳವಾರ ಸನ್ಮಾನ ನಡೆಯಿತು.

ಅಲೆವೂರಿಗೆ ಭೇಟಿ ನೀಡಿದ ಶ್ರೀಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸ್ವಾಗತ ಕೋರಲಾಯಿತು. ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳು ಆರತಿ ಬೆಳಗಿದರು. ಸಮಿತಿಯ ಪರವಾಗಿ ಊರ ನಾಗರಿಕರ ಪರವಾಗಿ ಶ್ರೀಗಳಿಗೆ ಗೌರವದ ಅಭಿನಂದನೆ‌ ಸಲ್ಲಿಸಲಾಯಿತು.

ನಂತರ ಸಂಕಲ್ಪ ಸಭಾಂಗಣದ ಬಳಿಯಿಂದ ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಶ್ರೀಪಾದರನ್ನು ವಿವಿಧ ಭಜನಾ ತಂಡಗಳು, ಕೊಂಬು, ವಾದ್ಯ, ಚೆಂಡೆ, ಬ್ಯಾಂಡ್‌ನೊಂದಿಗೆ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ADVERTISEMENT

ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಮರನಾಥ್ ಶೆಟ್ಟಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಪರ್ಯಾಯ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಂಗಳವಾರ ತಾಳಮದ್ದಲೆ ನಡೆಯಿತು.

ಹಬ್ಬದ ವಾತಾವರಣ: ರಥಬೀದಿಯು ವಿದ್ಯುತ್‌ದೀಪಗಳಿಂದ ಅಲಂಕೃತವಾಗಿದ್ದು, ಆಟಿಕೆ ಸಾಮಗ್ರಿಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟವು ಗರಿಗೆದರಿವೆ. ನಗರದ ಪ್ರಮುಖ ಜಂಕ್ಷನ್‌, ರಸ್ತೆ ಡಿವೈಡರ್‌ಗಳನ್ನು ಧ್ವಜ, ಪತಾಕೆಗಳಿಂದ ಸಿಂಗರಿಸಲಾಗಿದೆ.

ನಗರದ ಜಂಕ್ಷನ್‌ವೊಂದರಲ್ಲಿ ತೋರಣಗಳ ಅಲಂಕಾರ
ಉಡುಪಿಯಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು

ಧರ್ಮಸ್ಥಳದಿಂದ ಹೊರೆಕಾಣಿಕೆ

ಶಿರೂರು ಪರ್ಯಾಯದ ಗೌರವಾಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 50 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ ಮತ್ತು 15 ಕ್ವಿಂಟಲ್ ತರಕಾರಿಯನ್ನು ಶ್ರೀಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ‌ ಮೊದಲದಿನ ಹೊರೆಕಾಣಿಕೆ ಸಲ್ಲಿಕೆಯಾಗಿತ್ತು.

ಕ್ಷೇತ್ರದ ವತಿಯಿಂದ 2ನೇ ಹೊರೆಕಾಣಿಕೆ ಸಲ್ಲಿಕೆಯಾಗಿದ್ದು ಶಿರೂರು ಶ್ರೀಪಾದರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಧರ್ಮಸ್ಥಳ ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಮಠದ ದಿವಾನ ಉದಯ ಕುಮಾರ ಸರಳತ್ತಾಯ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಕಾರ್ಯದರ್ಶಿ ಮೋಹನ್ ಭಟ್ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ನಾಗರಾಜ್ ಶೆಟ್ಟಿ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ದಿಲೀಪ್ ಜೈನ್ ಪ್ರಚಾರ ಸಮಿತಿಯ ನಂದನ್ ಜೈನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.