ADVERTISEMENT

ಕೋವಿಡ್‌ನಿಂದ ಮೃತಪಟ್ಟ 31 ಪತ್ರಕರ್ತರಿಗೆ ಪರಿಹಾರ

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಪ್ರೆಸ್‌ಕ್ಲಬ್‌ಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:04 IST
Last Updated 20 ಜೂನ್ 2021, 1:04 IST
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಶನಿವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಶನಿವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದರು.   

ಉಡುಪಿ: ರಾಜ್ಯದಲ್ಲಿ ಕೋವಿಡ್‌ನಿಂದ 70ಕ್ಕೂ ಹೆಚ್ಚು ಪತ್ರಕರ್ತರು ಮೃತಪಟ್ಟಿದ್ದು, ಮೊದಲ ಅಲೆಯಲ್ಲಿ ಮೃತಪಟ್ಟ 31 ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹ 5 ಲಕ್ಷ ಪರಿಹಾರ ಹಾಗೂ ಎರಡು ಕುಟುಂಬಗಳಿಗೆ ಮನೆ ಒದಗಿಸುವಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಶನಿವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 8,000 ಜನರು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ವೃತ್ತಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿಸುತ್ತಿರುವ ಪತ್ರಕರ್ತರು ಕೋವಿಡ್‌ಗೆ ಬಲಿಯಾಗಿದ್ದು ದುಃಖದ ವಿಚಾರ. ಮೊದಲ ಅಲೆಯಲ್ಲಿ 31 ಹಾಗೂ ಎರಡನೇ ಅಲೆಯಲ್ಲಿ 30ಕ್ಕೂ ಅಧಿಕ ಪತ್ರಕರ್ತರು ಮೃತಪಟ್ಟಿದ್ದಾರೆ. 30ಕ್ಕೂ ಅಧಿಕ ಪತ್ರಿಕಾ ವಿತರಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್‌ನಿಂದ ಒಂದೂವರೆ ವರ್ಷದಿಂದ ರಾಜ್ಯಮಟ್ಟದ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಪತ್ರಿಕೆಗಳಿಗೆ ಬಾಕಿ ಇದ್ದ ₹ 56 ಕೋಟಿ ಸರ್ಕಾರಿ ಜಾಹೀರಾತು ಬಾಕಿಯನ್ನು ಒಂದೇ ಕಂತಿನಲ್ಲಿ ಸರ್ಕಾರ ಬಿಡುಗಡೆ ಮಾಡಿದೆ ಎಂದರು.‌

ADVERTISEMENT

ಏಷ್ಯನ್ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಮದನ್ ಗೌಡ ಮಾತನಾಡಿ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ರಾಜ್ಯ ಸರ್ಕಾರ ನೀಡಿರುವ ₹ 2 ಕೋಟಿ ವೌಲ್ಯದ ನಿವೇಶನದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರವೇ ಶಂಕುಸ್ಥಾಪನೆ ನಡೆಯಲಿದೆ ಎಂದರು.

ಈ ಸಂದರ್ಭ ಉಡುಪಿ ಜಿಲ್ಲಾ ಸಂಘ ಹಾಗೂ ಪ್ರತಕರ್ತರಿಂದ ಬೇಡಿಕೆಗಳ ಮನವಿಯನ್ನು ಶಿವಾನಂದ ತಗಡೂರು ಅವರಿಗೆ ಸಲ್ಲಿಸಲಾಯಿತು. ನಮ್ಮ ಕುಂದಾಪ್ರ ಕನ್ನಡ ಗಲ್ಫ್‌ ಬಳಗದಿಂದ ನೀಡಲಾದ ಫೇಸ್ ಶೀಲ್ಡ್‌ಗಳನ್ನು ಪತ್ರಕರ್ತರಿಗೆ ವಿತರಿಸಲಾಯಿತು. ಬಳಿಕ ಪತ್ರಕರ್ತರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಚರ್ಚೆ ನಡೆಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತರಾದ ರಾಕೇಶ್ ಕುಂಜೂರು ಹಾಗೂ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಗೆ ಭೇಟಿನೀಡಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್‌ನ ಜಿಆರ್‌ಎಂ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.