ADVERTISEMENT

ನಾಯಕತ್ವ ಗುಣದಿಂದ ಸ್ವಾವಲಂಬಿ ಬದುಕು: ರಾಜೇಶ ಶೆಟ್ಟಿ ಬಿರ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ವಲಯದ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 3:05 IST
Last Updated 23 ಜನವರಿ 2026, 3:05 IST
ಚಾಂತಾರು ಮಹಿಷಮರ್ಧಿನಿ ಗದ್ದುಗೆ ಅಮ್ಮನವರ ದೇವಸ್ಥಾನದ ಶ್ರೀದೇವಿ ಕಲಾಮಂದಿರದಲ್ಲಿ ಗುರುವಾರ ನಡೆದ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ 7 ಜನ ಮಾಜಿ ಸೇವಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಚಾಂತಾರು ಮಹಿಷಮರ್ಧಿನಿ ಗದ್ದುಗೆ ಅಮ್ಮನವರ ದೇವಸ್ಥಾನದ ಶ್ರೀದೇವಿ ಕಲಾಮಂದಿರದಲ್ಲಿ ಗುರುವಾರ ನಡೆದ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ 7 ಜನ ಮಾಜಿ ಸೇವಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.   

ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿ ಬದುಕು ಮತ್ತು ಶಿಸ್ತಿನ ಪಾಠದೊಂದಿಗೆ ನಾಯಕತ್ವ ಗುಣವನ್ನು ಕಲಿತುಕೊಂಡಿದ್ದಾರೆ ಎಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಬಿರ್ತಿ ಹೇಳಿದರು.

ಚಾಂತಾರು ಮಹಿಷಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನದ ಶ್ರೀದೇವಿ ಕಲಾಮಂದಿರದಲ್ಲಿ ಗುರುವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಬ್ರಹ್ಮಾವರ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ 9 ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಯಾವುದೇ ಉನ್ನತ ಹುದ್ದೆ‌ಯಲ್ಲಿದ್ದರೂ, ಮನೆಯಲ್ಲಿ ಮಕ್ಕಳಿಗೆ ಮಾತೆಯಾಗಿ, ಪತಿಗೆ ಸತಿಯಾಗಿ, ಸುಸಂಸ್ಕೃತಿಯನ್ನು ಅಳವಡಿಸಿಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ದೇಶದ ವಿಶೇಷತೆ ಎಂದು ಅವರು ಹೇಳಿದರು.

ADVERTISEMENT

ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿ ಸದಸ್ಯರ ವಾರದ ₹10ರ ಉಳಿತಾಯ ಕೇವಲ ಬ್ರಹ್ಮಾವರ ತಾಲ್ಲೂಕಿನಲ್ಲಿ ₹22 ಕೋಟಿ ಹಣ ಸದಸ್ಯರ ಬ್ಯಾಂಕ್ ಖಾತೆಯಲ್ಲಿದೆ. ಇದರ ಲಾಭಾಂಶ ₹ 4 ಕೋಟಿಯನ್ನು ಸದಸ್ಯರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬ್ರಹ್ಮಾವರ ವಲಯದ ಅಧ್ಯಕ್ಷೆ ಆಶಾ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಆರೂರು, ಬಾಳ್ಕುದ್ರು, ಮಟಪಾಡಿ, ಹಂದಾಡಿ, ಕುಮ್ರಗೋಡು, ಕೊಳಂಬೆ, ಎಳ್ಳಂಪಳ್ಳಿ ಮತ್ತು ವಾಂರಬಳ್ಳಿಯ ನಿರ್ಗಮಿತ ಪದಾಧಿಕಾರಿಗಳಿಂದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು.

ಸಂಘದ 7 ಜನ ಮಾಜಿ ಸೇವಾ ಪ್ರತಿನಿಧಿಗಳಾದ ವಾರಂಬಳ್ಳಿಯ ಶ್ಯಾಮಲಾ, ಮಟಪಾಡಿಯ ಶೈಲಾ, ಬೇಬಿ, ಮಟಪಾಡಿಯ ನಾಗರಾಜ, ಚಾಂತಾರಿನ ಶ್ವೇತಾ, ಕೊಳಂಬೆಯ ಚಂದ್ರಕಲಾ ಮತ್ತು ಚಾಂತಾರಿನ ನಾಗರತ್ನಾ ಅವರನ್ನು ಸನ್ಮಾನಿಸಲಾಯಿತು. ಶೌರ್ಯ ವಿಪತ್ತು ತಂಡದ ಸದಸ್ಯರನ್ನು ಗೌರವಿಸಲಾಯಿತು. ಹೊಸ ಸದಸ್ಯರಿಗೆ ಕೈಪಿಡಿ ನೀಡಲಾಯಿತು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ನ ಬ್ರಹ್ಮಾವರ ವಲಯದ ಅಧ್ಯಕ್ಷ ರಾಜೀವ ಕುಲಾಲ, ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ, ಸಂತೋಷ ಶೆಟ್ಟಿ ಆರೂರು, ಮಟಪಾಡಿ ವಿಶ್ವನಾಥ ಶೆಟ್ಟಿ, ಭಜನಾ ಪರಿಷತ್‌ನ ಚಂದ್ರಶೇಖರ ಶೆಟ್ಟಿ, ಚೇರ್ಕಾಡಿ ಗ್ರಾ.ಪಂ ಅಧ್ಯಕ್ಷ ನಾರಾಯಣ ನಾಯ್ಕ, ಗದ್ದುಗೆ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಮುಕುಂದ ನಾಯ್ಕ, ಚಾಂತಾರು ಗ್ರಾ.ಪಂ ಅಧ್ಯಕ್ಷೆ ಪ್ರೇಮ ಶೆಟ್ಟಿ, ಹಂದಾಡಿ ಗ್ರಾ.ಪಂ ಅಧ್ಯಕ್ಷೆ ಶಾರದಾ ಪೂಜಾರಿ, ನೀಲಾವರ ಗ್ರಾ.ಪಂ ಅಧ್ಯಕ್ಷೆ ಬೇಬಿ ಇದ್ದರು.

ಯೋಜನೆಯ ಬ್ರಹ್ಮಾವರ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್‌ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ಜ್ಯೋತಿ ಆರೂರು ವಂದಿಸಿದರು. ಶರತ್ ರಾಜ್‌ ಕಾರ್ಯಕ್ರಮ ನಿರೂಪಿಸಿದರು. ಅದಕ್ಕೂ ಮುನ್ನ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಬ್ರಹ್ಮಾವರ ವಲಯದ ವತಿಯಿಂದ ಹೆರಂಜೆ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಕೆಮ್ಮಣ್ಣುಕಡು ಗದ್ದುಗೆ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.