ADVERTISEMENT

ಸಮಾಜ ಸೇವಕ ದೇವದಾಸ್ ಶೆಟ್ಟಿಗೆ ಕಸಾಪ ಗೌರವ 

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:21 IST
Last Updated 21 ಅಕ್ಟೋಬರ್ 2024, 14:21 IST
ಕಸಾಪ ಕಾಪು ಹಿರಿಯ ಸಮಾಜ ಸೇವಕ ಕಾಪು ಕಲ್ಯಾ ನಿವಾಸಿ  ದೇವದಾಸ್ ಶೆಟ್ಟಿ ಇವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಕಾಪು ಘಟಕದ ಸಹಭಾಗಿತ್ವದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ಕಾರ್ಯಕ್ರಮದಡಿಯಲ್ಲಿ ಸನ್ಮಾನಿಸಲಾಯಿತು. 
ಕಸಾಪ ಕಾಪು ಹಿರಿಯ ಸಮಾಜ ಸೇವಕ ಕಾಪು ಕಲ್ಯಾ ನಿವಾಸಿ  ದೇವದಾಸ್ ಶೆಟ್ಟಿ ಇವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಕಾಪು ಘಟಕದ ಸಹಭಾಗಿತ್ವದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ಕಾರ್ಯಕ್ರಮದಡಿಯಲ್ಲಿ ಸನ್ಮಾನಿಸಲಾಯಿತು.    

ಕಾಪು (ಪಡುಬಿದ್ರಿ): ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆಯ ರೂವಾರಿ, ಕೊರಗ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಮಾಜ ಸೇವಕ ಕಲ್ಯಾ ನಿವಾಸಿ ದೇವದಾಸ್ ಶೆಟ್ಟಿ ಅವರಿಗೆ ಶನಿವಾರ ಅವರ ನಿವಾಸ ಗಾಂಧಿ ಸೇವಾಶ್ರಮದ ‘ಸರ್ವೋದಯ’ದಲ್ಲಿ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಕಾಪು ಘಟಕದ ಸಹಭಾಗಿತ್ವದಲ್ಲಿ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಡಿಯಲ್ಲಿ ದೇವದಾಸ್ ಅವರನ್ನು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಪು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪುರಸ್ಕರಿಸಿದರು.

ದೇವದಾಸ್ ಶೆಟ್ಟಿ ಮಾತನಾಡಿ, ನನ್ನ ಶಿಷ್ಯನೊಬ್ಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಕೊರಗ ಸಮುದಾಯ ಅನೇಕ ತಲೆಮಾರುಗಳಿಂದ ಅಸ್ಪೃಶ್ಯತೆ, ಊಳಿಗಮಾನ್ಯ ವ್ಯವಸ್ಥೆಯ ಸಂಧಿಗ್ದ ಸನ್ನಿವೇಶದಲ್ಲೂ ಬಾಬು ಕೊರಗನಲ್ಲಿ ಚಿಂತಕನ ವ್ಯಕ್ತಿತ್ವ ಜಾಗೃತವಾಗಿ, ಕವಿಯಾಗಿ ಸಾಹಿತಿ, ಲೇಖಕನಾಗಿ ಮೂಡಿ ಬಂದಿರುವುದು ಕೊರಗರ ಮುನ್ನಡೆಯಲ್ಲಿ ದೊಡ್ಡ ಮೈಲಿಗಲ್ಲು. ತೀರಾ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ವ್ಯಕ್ತಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಹೆಮ್ಮೆಯ ವಿಚಾರ ಎಂದರು.

ADVERTISEMENT

ಇಂದಿನ ಸನ್ನಿವೇಶದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವುದು ಸುಲಭದ ಕೆಲಸವಲ್ಲ. ಶೇ 80ರಷ್ಟು ಮಕ್ಕಳು ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾರೆ. ಮುಂದೆ ಕನ್ನಡ ಮಾತನಾಡುವ, ಓದುವವವರ ಸಂಖ್ಯೆ ಕಡಿಮೆ ಆಗುವ ಅಪಾಯದಲ್ಲಿದ್ದೇವೆ. ಇದು ಕನ್ನಡ ಸಾಹಿತ್ಯ ಪರಿಷತ್ತಿಗೂ ಸವಾಲಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿರು. ಕಸಾಪ ಕಾಪು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಮಾತುಗಳನ್ನಾಡಿದರು. ಕೋಶಾಧಿಕಾರಿ ಮನೋಹರ ಪಿ, ವಸಂತಿ ದೇವದಾಸ್ ಶೆಟ್ಟಿ, ಕೊರಗ ಸಮುದಾಯದ ಮುಂಖಂಡರಾದ ಗಣೇಶ್ ಕುಂದಾಪುರ, ಗಣೇಶ ಬಾರ್ಕೂರು, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಸುಧಾಕರ ಶೆಣೈ ಪಿಲಾರು, ಕಸಾಪ ಸದಸ್ಯರು, ಕೊರಗ ಸಂಘಟನೆ ಪದಾಧಿಕಾರಿಗಳು, ಸ್ಥಳೀಯರು ಇದ್ದರು.

ಕಸಾಪ ಕಾಪು ಘಟಕದ ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲಾನಂದ ನಾಯ್ಕ್ ಸನ್ಮಾನಪತ್ರ ವಾಚಿಸಿದರು. ವಿದ್ಯಾ ಅಮ್ಮಣ್ಣಾಯ ಪರಿಚಯಿಸಿದರು. ಅನಂತ ಮೂಡಿತ್ತಾಯ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. 

ಆಮಂತ್ರಣ ಪತ್ರಿಕೆ ಬಿಡುಗಡೆ: ‘ಸಾಮಾಜಿಕ ತಲ್ಲಣಗಳಿಗೆ ಸಾಹಿತ್ಯಿಕ ಪ್ರತಿಸ್ಪಂದನೆ’ ಪರಿಕಲ್ಪನೆಯಲ್ಲಿ ನವೆಂಬರ್ 16ರಂದು ಫಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೊರಗ ಭಾಷಾತಜ್ಞ, ಸಾಹಿತಿ, ಸಂಶೋಧಕ, ಪಾಂಗಾಳ ಬಾಬು ಕೊರಗ ಅಧ್ಯಕ್ಷತೆಯಲ್ಲಿ ಜರುಗಲಿರುವ ಕಾಪು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ದೇವದಾಸ್ ಶೆಟ್ಟಿ ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.