ADVERTISEMENT

ಸಮಸ್ಯೆ ಪರಿಹರಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:17 IST
Last Updated 13 ಜುಲೈ 2024, 6:17 IST
ಕಾರ್ಕಳ ತಾಲ್ಲೂಕಿನ ಸಾಣೂರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಕಾಮಗಾರಿಯಿಂದ ಉದ್ಭವಿಸಿದ ಸಮಸ್ಯಾ ತಾಣಗಳನ್ನು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನೇತೃತ್ವ ಜಿಲ್ಲಾಡಳಿತ ತಂಡ ಶುಕ್ರವಾರ ಪರಿಶೀಲಿಸಿತು
ಕಾರ್ಕಳ ತಾಲ್ಲೂಕಿನ ಸಾಣೂರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಕಾಮಗಾರಿಯಿಂದ ಉದ್ಭವಿಸಿದ ಸಮಸ್ಯಾ ತಾಣಗಳನ್ನು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನೇತೃತ್ವ ಜಿಲ್ಲಾಡಳಿತ ತಂಡ ಶುಕ್ರವಾರ ಪರಿಶೀಲಿಸಿತು   

ಕಾರ್ಕಳ: ಸಾಣೂರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಕಾಮಗಾರಿಯಿಂದ ಉದ್ಭವಿಸಿದ ಸಮಸ್ಯಾ ತಾಣಗಳನ್ನು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ನೇತೃತ್ವ ಜಿಲ್ಲಾಡಳಿತ ತಂಡ ಶುಕ್ರವಾರ ಪರಿಶೀಲಿಸಿತು.

ಸಾಣೂರು ಯುವಕ ಮಂಡಲ ಕಟ್ಟಡ ಮುಂಭಾಗ ಮೈದಾನದ ಬದಿಯಲ್ಲಿ ಉದ್ದಕ್ಕೂ ಗುಡ್ಡ ಜರಿದಿದ್ದು, 220 ಕೆ.ವಿ ಹೈಟೆನ್ಶನ್ ಗೋಪುರ, ಪಕ್ಕದ ತಲಾ 50 ಸಾವಿರ ಲೀ. ಸಾಮರ್ಥ್ಯದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿಯ ಪ್ರದೇಶ ಅಪಾಯಕಾರಿ ಸ್ಥಿತಿಯಲ್ಲಿದೆ.

ಗುಡ್ಡ ಜರಿತದ ಭಾಗಕ್ಕೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ಒಂದು ವಾರದೊಳಗೆ ಕೈಗೆತ್ತಿಕೊಂಡು, 3 ತಿಂಗಳೊಳಗೆ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮತ್ತು ಡಿಬಿಎಲ್ ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ADVERTISEMENT

60‌ ಮೀ. ಉದ್ದಕ್ಕೆ ಈಗಾಗಲೇ ಕಾರ್ಯಾದೇಶ ದೊರೆತಿದ್ದು, ಉಳಿದ 30ಮೀ ಭಾಗಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. 1 ವರ್ಷದ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದರೂ ಅದನ್ನು ಕಡೆಗಣಿಸಿ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಸುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಶಾಸಕ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡು, ಸುರಕ್ಷತಾ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಯಿತು.

ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆ ಬದಿಯಲ್ಲಿ ತಡೆಗೋಡೆಯ ಒಳಭಾಗದಲ್ಲಿ 8-10 ಅಡಿಯಷ್ಟು ಕೊರಕಲು ಬಿದ್ದಿದೆ. ವಿದ್ಯಾರ್ಥಿಗಳು ಓಡಾಡುವಲ್ಲಿ ಮಣ್ಣು ತುಂಬಿಸಿ ಸರಿಪಡಿಸುವುದಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ಕಾಲೇಜು ತನಕದ ರಸ್ತೆ ಡಾಂಬರೀಕರಣ ಮಾಡಿಸಬೇಕು. ಮೈದಾನದ ಅಲ್ಲಲ್ಲಿ ಮಣ್ಣು ತುಂಬಿರುವ ಕಾರಣ, ಈ ಬಾರಿ ಆಟೋಟ ಸ್ಪರ್ಧೆ ನಡೆಸಲಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ ಶೆಟ್ಟಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಆಟದ ಮೈದಾನವನ್ನು ಸಮತಟ್ಟುಗೊಳಿಸಲು ಸೂಚಿಸಿದರು.

ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿ ಹಾಗೂ ವಾಲಿಕೊಂಡಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್‌ಗಳನ್ನು ಸರಿಪಡಿಸಲು ಸೂಚಿಸಲಾಯಿತು. ಹೆದ್ದಾರಿ ಕಾಮಗಾರಿಯ ವೇಳೆ ತೆರವುಗೊಳಿಸಲಾದ 4 ಬಸ್ ನಿಲ್ದಾಣಗಳನ್ನು ಸ್ಥಳ ನಿಗದಿ ಪಡಿಸಿ, ನಿರ್ಮಿಸುವಂತೆ ಸೂಚಿಸಿದರು.

ಪುಲ್ಕೇರಿ ಬೈಪಾಸ್‌ನಲ್ಲಿ ರಸ್ತೆಯ ಬದಿ ಚರಂಡಿ ವ್ಯವಸ್ಥೆ, ಹೈಮಾಸ್ಟ್ ಅಳವಡಿಸುವುದು, ಪುಲ್ಕೇರಿ ಬೈಪಾಸ್‌ನಿಂದ ಸಾಣೂರು ಪೇಟೆ ಹಾದು (2 ಕಿ.ಮೀ) ಸಾಣೂರು ಯುವಕ ಮಂಡಲದ ತನಕ ಸರ್ವಿಸ್ ರಸ್ತೆ ನಿರ್ಮಿಸಲು ತಿಳಿಸಿದರು.

ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಜನರಲ್ ಮ್ಯಾನೇಜರ್ ರಾಘವ ರಾವ್, ತಹಶೀಲ್ದಾರ್ ನರಸಪ್ಪ, ಎ.ಸಿ. ರಶ್ಮಿ, ಭೂಸ್ವಾಧೀನಾಧಿಕಾರಿ ಇಸಾಕ್ ಮಹಮ್ಮದ್, ಸಿಬ್ಬಂದಿ ಸಂಜೀವ ಮತ್ತು ಗೋಪಾಲ ಸೇರಿಗಾರ್, ರಾ.ಹೆ ಎಂಜಿನಿಯರ್ ನಾಸೀರ್, ಪ್ರಸಾದ್, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ ಜೈನ್, ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಸಾಣೂರು ಹೆದ್ದಾರಿ ಭೂಮಾಲೀಕರ ಹೋರಾಟ ಸಮಿತಿ ಸಂಚಾಲಕ ಸಾಣೂರು ನರಸಿಂಹ ಕಾಮತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.