ADVERTISEMENT

ಮುಂಬೈನಿಂದ ಉಡುಪಿಗೆ ಮತ್ತೆ ಬರಲಿದ್ದಾರೆ 15,000 ಮಂದಿ

ಜಿಲ್ಲಾಡಳಿತದ ಮುಂದಿದೆ ಸಾಲು ಸವಾಲುಗಳು; ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ

ಬಾಲಚಂದ್ರ ಎಚ್.
Published 4 ಜೂನ್ 2020, 3:38 IST
Last Updated 4 ಜೂನ್ 2020, 3:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. 20 ದಿನಗಳ ಹಿಂದೆ ಕೋವಿಡ್‌ ಸೋಂಕು ಮುಕ್ತವಾಗಿದ್ದ ಉಡುಪಿ ಜಿಲ್ಲೆ ಈಗ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಗಳ ಪೈಕಿ ಮುಂಚೂಣಿಯಲ್ಲಿದೆ. ಇದರ ಮಧ್ಯೆ ಸೋಂಕಿತರ ಸಂಖ್ಯೆ ನಾಲ್ಕು ಅಂಕಿ ದಾಟಿದರೆ ಜಿಲ್ಲೆಯಲ್ಲಿ ಚಿಕಿತ್ಸೆ ನೀಡುವಷ್ಟು ಬೆಡ್‌ಗಳ ಸಂಖ್ಯೆ ಲಭ್ಯವಿದೆಯೇ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

500ರ ಗಡಿಯತ್ತ ಸೋಂಕಿತರು: ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಒಂದೆರಡು ದಿನಗಳಲ್ಲಿ 500ರ ಗಡಿ ಮುಟ್ಟುವ ಸಾಧ್ಯತೆಗಳಿವೆ. ಸದ್ಯ ಕುಂದಾಪುರ, ಕಾರ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೂರು ಆಸ್ಪತ್ರೆಗಳ ಬೆಡ್‌ ಸಾಮರ್ಥ್ಯವನ್ನೂ ಮೀರಿಸುವಷ್ಟು ಜಿಲ್ಲೆಯಲ್ಲಿ ಸೋಂಕಿತರಿದ್ದಾರೆ.

5 ಸಾವಿರಕ್ಕೂ ಹೆಚ್ಚು ವರದಿ ಬಾಕಿ: ಹೊರ ರಾಜ್ಯಗಳಿಂದ ಬಂದಿರುವ 8,472 ಮಂದಿ, ವಿದೇಶಗಳಿಂದ ಬಂದ 152 ಮಂದಿ ಹಾಗೂ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ 12,513 ಜನರ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿ, 7577 ಮಾದರಿಗಳ ಫಲಿತಾಂಶ ಮಾತ್ರ ಬಂದಿದೆ. ಇನ್ನೂ 4,936 ವರದಿಗಳು ಬರುವುದು ಬಾಕಿ ಇದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ADVERTISEMENT

ಆತಂಕಕಾರಿ ವಿಚಾರ ಎಂದರೆ ಪರೀಕ್ಷಾ ವರದಿ ಬರುವ ಮುನ್ನವೇ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು, ಮನೆಮಂದಿಗೆ ಸೋಂಕು ತಗುಲುವ ಅಪಾಯ ಎದುರಾಗಿದೆ. ಅದರಲ್ಲೂ ಹಿರಿಯರು ಹಾಗೂ ಮಕ್ಕಳಿಗೆ ತಗುಲಿದರೆ ಸಮಸ್ಯೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

ಮಹಾರಾಷ್ಟ್ರದಿಂದ ಮತ್ತೆ ಆಘಾತ?

ಜಿಲ್ಲೆಗೆ ಈಗಾಗಲೇ ಮುಂಬೈ ಮಹಾಆಘಾತ ಕೊಟ್ಟಿದೆ. ಈಗಿರುವ ಸೋಂಕಿತರಲ್ಲಿ ಶೇ 90ಕ್ಕಿಂತ ಹೆಚ್ಚು ಮಂದಿ ಮಹಾರಾಷ್ಟ್ರದಿಂದ ಬಂದವರು. ಈಗ 2ನೇ ಹಂತದಲ್ಲಿ ಮತ್ತೆ ಮಹಾರಾಷ್ಟ್ರದಿಂದ ಉಡುಪಿಗೆ ಬರಲು 15 ಸಾವಿರಕ್ಕೂ ಹೆಚ್ಚು ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇವರೆನ್ನೆಲ್ಲ ಸರ್ಕಾರಿ ಕ್ವಾರಂಟೈನ್‌ ಮಾಡುವುದು ಜಿಲ್ಲಾಡಳಿತಕ್ಕೆ ನಿಜಕ್ಕೂ ಸವಾಲಿನ ಕೆಲಸ.

ಮೇ ಆರಂಭದಲ್ಲಿ ಹೊರ ರಾಜ್ಯಗಳಿಂದ ಬಂದವರಿಗೆ ಜಿಲ್ಲೆಯ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಸರ್ಕಾರಿ ಕ್ವಾರಂಟೈನ್‌ ಮಾಡಲಾಗಿತ್ತು. ಈಗಜೂನ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಹೊರ ರಾಜ್ಯಗಳಿಂದ ಬರುವವರನ್ನು ಸರ್ಕಾರಿ ಕ್ವಾರಂಟೈನ್‌ ಮಾಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಕುಂದಾಪುರದ ತಾಲ್ಲೂಕು ಆಸ್ಪತ್ರೆಯನ್ನು ಕೋಟಗೆ ಸ್ಥಳಾಂತರಿಸಿ, ಹೀಗಿರುವ 120 ಬೆಡ್‌ಗಳ ಸಾಮರ್ಥ್ಯವನ್ನು 200ಕ್ಕೆ ವಿಸ್ತರಿಸಿ ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಜತೆಗೆ, ಆದರ್ಶ ಆಸ್ಪತ್ರೆಯಲ್ಲಿ 65 ಬೆಡ್‌, ಕೊಲ್ಲೂರಿನ ಲಲಿತಾಂಬಿಕಾ ಗೆಸ್ಟ್‌ಹೌಸ್‌ ಅನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಬದಲಿಸಿ, ಉಭಯ ತಾಲ್ಲೂಕುಗಳಲ್ಲಿ 400 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಬೆಡ್‌ಗಳ ಕೊರತೆ ಎದುರಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.