
ಕುಂದಾಪುರ: ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿರುವ ಪುಣ್ಯನದಿ ಸೌಪರ್ಣಿಕೆ. ಈ ನದಿಯಲ್ಲಿ ಮಾಲಿನ್ಯ, ಭೂ ಅತಿಕ್ರಮಣಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ. ಮತ್ತೆ ನದಿ ಕಲುಷಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಕೊಲ್ಲೂರಿನ ಹೊರ ವಲಯದ ಸೌಪರ್ಣಿಕಾ ಸ್ನಾನಘಟ್ಟಕ್ಕೆ ತೆರಳುವ ಮಾರಿಕಟ್ಟೆಯ ದಾರಿಯ ಎಡಬದಿಯಲ್ಲಿ ಪೈಪ್‌ಗಳ ಮೂಲಕ ಕೊಲ್ಲೂರು ವ್ಯಾಪ್ತಿಯ ಕಲುಷಿತ ಹಾಗೂ ದುರ್ವಾಸನೆ ನೀರು ನದಿ ಸೇರುತ್ತಿದೆ. ವಿದ್ಯಾರ್ಥಿನಿಯರ ವಸತಿ ಗೃಹದ ಹಿಂಭಾಗದ ಕಾಡಿನ ಮೂಲಕ ಅನಧಿಕೃತವಾಗಿ ಪೈಪ್ ಅಳವಡಿಸಿ, ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿಯ ಆಸುಪಾಸಿನಲ್ಲಿ ವಾಸಿಸುವವರ ನೆಮ್ಮದಿಯೂ ಹಾಳಾಗಿದೆ. ಬಸ್ ನಿಲ್ದಾಣದ ಚರಂಡಿಯ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ. ಪರಿಸರದ ಬಾವಿಯ ನೀರು ಬಣ್ಣ ಬದಲಾಗಿದ್ದು, ವಾಸನೆಯಿಂದ ಕೂಡಿದೆ ಎಂಬುದು ಸ್ಥಳೀಯರ ಆರೋಪ.
ಸೌಪರ್ಣಿಕಾ ನದಿಯ ಭಾಗವಾಗಿರುವ ‘ಅಗ್ನಿತೀರ್ಥ’ಕ್ಕೆ ಪೌರಾಣಿಕ ಹಿನ್ನೆಲೆ ಇದೆ. ದೇವಾಲಯದ ಮುಂದಿರುವ ಅಗ್ನಿತೀರ್ಥದಲ್ಲಿ ಮಿಂದೆದ್ದರೆ, ಚರ್ಮದ ಕಾಯಿಲೆಗಳು ಗುಣವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಭಕ್ತರು ಅಗ್ನಿತೀರ್ಥದಲ್ಲಿ ಸ್ನಾನ ಮಾಡಿ, ದೇವರ ದರ್ಶನ ಮಾಡುತ್ತಿದ್ದರು. ಆದರೆ, ಈಗ ಈ ಪವಿತ್ರ ಸ್ಥಳ ಕೊಳಚೆಯಾಗಿ ಮಾರ್ಪಟ್ಟಿದೆ. ಚರ್ಮ ವ್ಯಾಧಿ ಶಮನಕ್ಕೆ ಇಲ್ಲಿ ಸ್ನಾನ ಮಾಡುವ ಪರಿಪಾಠ ಬದಲಾಗಿ, ಇಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿ ತಗುಲಬಹುದು ಎನ್ನುವ ಭಯ ಕಾಡುತ್ತಿದೆ. ಹೀಗಾಗಿ ಭಕ್ತರು, ಇತ್ತೀಚಿನ ವರ್ಷಗಳಲ್ಲಿ ಕೇವಲ ಸಂಪ್ರೆ ಗಣಪತಿ ದೇವಸ್ಥಾನದ ಸಮೀಪದ ನದಿ ತಟದಲ್ಲಿ ಮಾತ್ರ ಪುಣ್ಯ ಸ್ನಾನ ಮಾಡುತ್ತಾರೆ. ನದಿ ಅಕ್ಕಪಕ್ಕದಲ್ಲಿ ತಲೆಎತ್ತಿರುವ ಖಾಸಗಿ ವಸತಿ ಗೃಹಗಳಿಂದಲೂ ಕೊಳಚೆ ನೀರು ನದಿಗೆ ಸೇರುತ್ತಿದೆ ಎನ್ನುತ್ತಾರೆ ಸ್ಥಳೀಯರು.
ತಿಳಿ ನೀರಿನಿಂದ ನಿರ್ಮಲವಾಗಿ ಕಾಣುತ್ತಿದ್ದ ಸೌಪರ್ಣಿಕೆ, ಈಗ ಮಲೀನಗೊಂಡು ಹಸಿರು ಪಾಚಿ, ಕೆಸರಿನ ರಾಶಿಯಿಂದ ತುಂಬಿದೆ. ಪರಿಸರ ಆಸಕ್ತರು, ಕ್ಷೇತ್ರದ ಭಕ್ತರು, ನದಿ ಸಂರಕ್ಷಣೆಗೆ ಹೋರಾಟ ಮಾಡುತ್ತಿದ್ದಾರೆ. ಆದರೆ, ನದಿ ಮಾಲಿನ್ಯ ಇನ್ನೂ ನಿಂತಿಲ್ಲ ಎನ್ನುವುದು ಅವರಿಗೆ ಬೇಸರ ತಂದಿದೆ.
- ಕೊಲ್ಲೂರು ಕ್ಷೇತ್ರಕ್ಕೆ ಕೋಟ್ಯಂತರ ಭಕ್ತರು ಬರುತ್ತಾರೆ. ಕ್ಷೇತ್ರದ ಇತಿಹಾಸದೊಂದಿಗೆ ಬೆರೆತಿರುವ ಸೌಪರ್ಣಿಕೆಯ ಒಡಲನ್ನು ಕದಡುವ ದುಷ್ಟಶಕ್ತಿಗಳ ವಿರುದ್ಧ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಕೆ.ವಿಕಾಸ್ ಹೆಗ್ಡೆ ರೈತ ಸಂಘದ ಮುಖಂಡ
ವಿಚಾರಣೆಗೆ ಹಾಜರಾಗಲು ನೋಟಿಸ್
ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ಅವರು ಸುಪ್ರೀಂ ಕೋರ್ಟ್ ಹಸಿರು ಪೀಠದಲ್ಲಿ ದಾಖಲು ಮಾಡಿರುವ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಡಿ.16ರಂದು ಪತ್ರ ಬರೆದಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಡಿ.23ರಂದು ಪದನಿಮಿತ್ತ ಕಾರ್ಯದರ್ಶಿ ಎದುರು ವಿಚಾರಣೆಗೆ ಹಾಜರಾಗುವಂತೆ ದೇವಸ್ಥಾನ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ನೀರು ಸರಬರಾಜು ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದೆ. ಕೊಲ್ಲೂರು ವನ್ಯಜೀವಿ ವಲಯಾರಣ್ಯಾಧಿಕಾರಿ ಕೂಡ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿಗೆ ಪತ್ರ ಬರೆದು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಕೊಲ್ಲೂರು ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಸೌಪರ್ಣಿಕಾ ನದಿ ನೀರು ಕಲುಷಿತವಾಗುವುದರಿಂದ ಪ್ರಾಣಿ ಪಕ್ಷಿ ಜಲಚರಗಳು ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.