ADVERTISEMENT

ಮಲ್ಪೆ: ಬಂದರಿನಲ್ಲಿ ಕೂಲಿ ಮಾಡುವ ಹುಡುಗ ರಾಜ್ಯಕ್ಕೆ ಪ್ರಥಮ

ಮಲ್ಪೆಯ ಸರ್ಕಾರಿ ಜೂನಿಯರ್ ಕಾಲೇಜಿನ ಪುನೀತ್ ನಾಯ್ಕ್‌ಗೆ ಶೇ 100 ಅಂಕ

ಬಾಲಚಂದ್ರ ಎಚ್.
Published 19 ಮೇ 2022, 13:24 IST
Last Updated 19 ಮೇ 2022, 13:24 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿರುವ ಪುನೀತ್ ನಾಯ್ಕ್ ಕುಟುಂಬ ಸದಸ್ಯರೊಂದಿಗೆ. (ಎಡದಿಂದ ಮೂರನೆಯವರು)
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿರುವ ಪುನೀತ್ ನಾಯ್ಕ್ ಕುಟುಂಬ ಸದಸ್ಯರೊಂದಿಗೆ. (ಎಡದಿಂದ ಮೂರನೆಯವರು)   

ಉಡುಪಿ: ಮಲ್ಪೆ ಬಂದರಿನಲ್ಲಿ ಕೂಲಿ ಮಾಡುವ ದಂಪತಿಯ ಪುತ್ರ ಪುನೀತ್ ನಾಯ್ಕ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಮಲ್ಪೆಯ ಸರ್ಕಾರಿ ಜೂನಿಯರ್‌ ಕಾಲೇಜಿನ ವಿದ್ಯಾರ್ಥಿಯಾಗಿರುವ ಪುನೀತ್ ಬಡತನದ ಬೇಗೆಯ ಮಧ್ಯೆಯೂ ಗಮನಾರ್ಹ ಸಾಧನೆ ಮಾಡಿರುವುದು ವಿಶೇಷ.

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ಪುನೀತ್ ನಾಯ್ಕ್‌ ಮಲ್ಪೆಯ ಕಲ್ಮಾಡಿಯಲ್ಲಿ ಪುಟ್ಟದೊಂದು ಬಾಡಿಗೆ ಹೆಂಚಿನ ಸೂರಿನಲ್ಲಿ ತಾಯಿ, ಅಣ್ಣನೊಂದಿಗೆ ವಾಸವಿದ್ದಾನೆ. ಸೂರ್ಯ ಉದಯಿಸುವ ಮುನ್ನವೇ ಅಮ್ಮನೊಟ್ಟಿಗೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ಕೂಲಿ ಕೆಲಸ ಮಾಡುವ ಪುನೀತ್‌ ಚಿಕ್ಕ ಪ್ರಾಯದಲ್ಲೇ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರಲು ತಾಯಿಗೆ ಹೆಗಲು ಕೊಟ್ಟಿದ್ದಾನೆ.

ADVERTISEMENT

ಕೂಲಿ ಕೆಲಸ ಮುಗಿಸಿ ಪ್ರತಿನಿತ್ಯ ತಪ್ಪದೆ ಶಾಲೆಗೆ ಹಾಜರಾಗುವ ಪುನೀತ್ ವಿದ್ಯಾಭ್ಯಾಸ ಮಾತ್ರವಲ್ಲ ನಡವಳಿಕೆಯಲ್ಲೂ ಶಿಕ್ಷಕರ ಮನ ಗೆದ್ದಿದ್ದಾನೆ. ಬಡತನ, ಶೈಕ್ಷಣಿಕ ಸೌಲಭ್ಯಗಳ ಕೊರತೆಯ ಮಧ್ಯೆಯೂ ಅತ್ಯುತ್ತಮ ಸಾಧನೆ ಮಾಡಿರುವ ಪುನೀತ್‌ ಭವಿಷ್ಯದಲ್ಲಿ ಜಿಲ್ಲಾಧಿಕಾರಿಯಾಗುವ ಕನಸು ಕಾಣುತ್ತಿದ್ದಾನೆ.

ಎಸ್ಸೆಸ್ಸೆಲ್ಸಿ ಸಾಧನೆ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಪುನೀತ್‌ ‘ಮನೆಯಲ್ಲಿ ಬಡತನ ಇದ್ದರೂ ಪೋಷಕರು ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಲಿಲ್ಲ. ಅವರ ಆಸೆಯಂತೆ ಹಾಗೂ ನನ್ನ ನಿರೀಕ್ಷೆಗೆ ತಕ್ಕಂತೆಯೇ ಫಲಿತಾಂಶ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಆರ್ಥಿಕ ಸಮಸ್ಯೆಯ ಕಾರಣ ರಜಾ ದಿನಗಳಲ್ಲಿ ಹಾಗೂ ಶಾಲೆ ಇದ್ದಾಗಲೂ ಮಲ್ಪೆ ಬಂದರಿನಲ್ಲಿ ಕೂಲಿ ಕೆಲಸ ಮಾಡುತ್ತೇನೆ. ಬೆಳಗಿನ ಜಾವ 4 ರಿಂದ 8 ಗಂಟೆಯವರೆಗೂ ಮೀನಿನ ಬಾಕ್ಸ್‌ಗಳನ್ನು ಹೊತ್ತು ಬಳಿಕ ಶಾಲೆಗೆ ಹೋಗುತ್ತೇನೆ. ನನ್ನಿಂದ ಕುಟುಂಬದ ಆರ್ಥಿಕ ಹೊರೆ ಸ್ವಲ್ಪ ಕಡಿಮೆಯಾಗಿದೆ ಎಂಬ ಸಮಾಧಾನ ಇದೆ ಎನ್ನುತ್ತಾರೆ ಪುನೀತ್‌.

ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಏಕಾಗ್ರತೆಯಿಂದ ಕೇಳುತ್ತೇನೆ. ಮನೆಗೆ ಬಂದ ಬಳಿಕ ಅಭ್ಯಾಸ ಮಾಡುತ್ತೇನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆಂದು ಟ್ಯೂಷನ್‌ಗೆ ಹೋಗಿಲ್ಲ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವರೇ ಹೆಚ್ಚು. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಲಿತವರು ಕೂಡ 125ಕ್ಕೆ 125 ಅಂಕಗಳನ್ನು ಪಡೆಯಬಹುದು. ಶಾಲೆ ಮುಖ್ಯವಲ್ಲ; ಆತ್ಮವಿಶ್ವಾಸ ಹಾಗೂ ಕಲಿಕೆ ಬಹಳ ಮುಖ್ಯ ಎಂದು ಆತ್ಮವಿಶ್ವಾಸದಿಂದ ನುಡಿದರು ಪುನೀತ್‌.

ಓದಿಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗದಿದ್ದರೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಮುಂದೆ ಐಎಎಸ್‌ ಅಧಿಕಾರಿಯಾಗುವ ಆಸೆ ಇದೆ. ಗುರಿ ಮುಟ್ಟುವ ಉತ್ಸಾಹ ಹಾಗೂ ಛಲವಂತೂ ಇದೆ ಎಂದು ಆತ್ಮವಿಶ್ಯಾಸ ವ್ಯಕ್ತಪಡಿಸಿದರು.

ಶೇ 75ರಷ್ಟು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು

ಮಲ್ಪೆಯ ಸರ್ಕಾರಿ ಜೂನಿಯರ್ ಕಾಲೇಜು ಹೊರ ಜಿಲ್ಲೆಗಳ ವಲಸೆ ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಗಮನ ಸೆಳೆದಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಹುತೇಕ ಮಕ್ಕಳು ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ 75ರಷ್ಟು ವಿದ್ಯಾರ್ಥಿಗಳು ಮಲ್ಪೆಯ ಬಂದರು ಸೇರಿದಂತೆ ಹಲವೆಡೆ ಕೂಲಿ ಕೆಲಸ ಮಾಡಿ ಶಾಲೆಗೆ ಬರುತ್ತಾರೆ. ಸೂರ್ಯ ಮೂಡುವ ಮುನ್ನವೇ ಕೂಲಿ ಕೆಲಸಕ್ಕೆ ತೆರಳುವ ವಿದ್ಯಾರ್ಥಿಗಳು ಶಾಲೆಯ ಸಮಯಕ್ಕೆ ತಪ್ಪದೆ ಹಾಜರಿರುತ್ತಾರೆ.

‘ಸಾಧನೆಯ ಬಗ್ಗೆ ಹೆಮ್ಮೆ ಇದೆ’

ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ. ಶೇ 100 ಫಲಿತಾಂಶ ಪಡೆಯಬಲ್ಲರು ಎಂಬುದನ್ನು ಪುನೀತ್ ನಾಯ್ಕ್‌ ಸಾಬೀತು ಮಾಡಿದ್ದಾನೆ. ಬೆಳಿಗ್ಗೆ ಬಂದರಿನಲ್ಲಿ ಕೂಲಿ ಕೆಲಸ ಮಾಡಿ ತಪ್ಪದೆ ಶಾಲೆಗೆ ಹಾಜರಾಗುತ್ತಾನೆ. ವಿದ್ಯಾಭ್ಯಾಸ ಮಾತ್ರವಲ್ಲ, ನಡವಳಿಕೆಯಲ್ಲೂ ಮಾದರಿಯಾಗಿದ್ದಾನೆ. ಪುನೀತ್ ಅಣ್ಣ ಕೂಡ ನಮ್ಮ ಶಾಲೆಯಲ್ಲಿಯೇ ಎಸ್ಸೆಸ್ಸೆಲ್ಸಿ ಮುಗಿಸಿದ್ದು 615 ಅಂಕಗಳನ್ನು ಪಡೆದಿದ್ದ. ಸಹೋದರರ ಸಾಧನೆಯ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.