ADVERTISEMENT

ಸಂತ ಪೀಟರ್‌ ನವೀಕೃತ ಚರ್ಚ್‌ ಉದ್ಘಾಟನೆ 15ರಂದು

₹ 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ; ಶತಮಾನದ ಇತಿಹಾಸ ಇರುವ ಇಗರ್ಜಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:19 IST
Last Updated 12 ಡಿಸೆಂಬರ್ 2019, 12:19 IST
ಫಿಲಿಫ್‌ ನೇರಿ ಆರಾನ್ಹಾ, ಧರ್ಮಗುರು 
ಫಿಲಿಫ್‌ ನೇರಿ ಆರಾನ್ಹಾ, ಧರ್ಮಗುರು    

ಉಡುಪಿ: ಜಿಲ್ಲೆಯ ಪ್ರಮುಖ ಕ್ಯಾಥೋಲಿಕ್ ಧರ್ಮಕೇಂದ್ರಗಳಲ್ಲಿ ಒಂದಾಗಿರುವ ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರಿನ ಸಂತ ಪೀಟರ್‌ ಚರ್ಚ್‌ ಅನ್ನು ನವೀಕರಣಗೊಳಿಸಲಾಗಿದ್ದು, ಡಿ.15ರಂದು ಮಧ್ಯಾಹ್ನ 3.30ಕ್ಕೆ ಚರ್ಚ್‌ ಪ್ರಾಂಗಣದಲ್ಲಿ ಆಶೀರ್ವಚನ ಹಾಗೂ ಬಲಿಪೂಜೆ ನಡೆಯಲಿದೆ ಎಂದು ಧರ್ಮಗುರು ಪಿಲಿಫ್‌ ನೇರಿ ಆರಾನ್ಹಾ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್‌ ಐಸಾ್ ಕೊಬೊ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧರ್ಮಪ್ರಾಂತ್ಯದ ವಿಕಾರ್ ಜನರಲ್‌ ಬ್ಯಾಪ್ಟಿಸ್ಟ್‌ ಮಿನೆಜಸ್‌, ಚಾನ್ಸಲರ್‌ ಸ್ಟ್ಯಾನಿ ಬಿ.ಲೋಬೊ, ಲಾರೆನ್ಸ್‌ ಡಿಸೋಜ, ಸಿಸ್ಟರ್ ಮೆಟಿಲ್ಡಾ ಮೊಂತೊರೊ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಾರ್ಕೂರು ಧರ್ಮಕೇಂದ್ರವು 1854ರಲ್ಲಿ ಆರಂಭಗೊಂಡು ಆರಂಭದಲ್ಲಿ ಕಲ್ಯಾಣಪುರ ಮಿಲಾಗ್ರಿಸ್‌ ಚರ್ಚ್‌ ಅಧೀನದಲ್ಲಿತ್ತು. ಬಳಿಕ 1863ರಲ್ಲಿ ಸ್ವತಂತ್ರ ಧರ್ಮಕೇಂದ್ರವಾಗಿ ರೂಪುಗೊಂಡು ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

1923ರಲ್ಲಿ ಗೋತಿಕ್ ಶೈಲಿಯಲ್ಲಿ ಸಂತ ಪೀಟರ್‌ ಚರ್ಚ್‌ ನಿರ್ಮಾಣವಾಯಿತು. ಕಾಲಾನಂತರ ಶಿಥಿಲಾವಸ್ಥೆ ತಲುಪಿದ ಚರ್ಚ್‌ ಅನ್ನು ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ₹ 2 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ. ₹ 50 ಲಕ್ಷ ಸರ್ಕಾರದ ಅನುದಾನ ಸಿಕ್ಕಿದೆ ಎಂದರು.

ಪವಿತ್ರಸ್ಥಾನ, ವಿದ್ಯುದ್ದೀಪಗಳು, ಮೂರ್ತಿಗಳು, ಸಂತ ಪೀಟರ್‌ ಅವರ ಜೀವನ ಸನ್ನಿವೇಶಗಳ ಚಿತ್ರಣ ಗಮನ ಸೆಳೆಯುತ್ತಿವೆ. ಧಾರ್ಮಿಕವಾಗಿ ವಿಶಿಷ್ಟವಾಗಿರುವ ಬಾರ್ಕೂರಿಗೆ ನವೀಕೃತ ಚರ್ಚ್‌ ವಿಶೇಷ ಮೆರಗು ನೀಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆರಾಲ್ಡ್‌ ಎಂ.ಕೋನ್ಸಾಲ್ವಿಸ್, ಲಿವೆಟ್‌ ಲುವಿಸ್‌, ಡೋಲ್ಫಿ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.