
ಉಡುಪಿ: ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಅದನ್ನು ಅನುಷ್ಠಾನಗೊಳಿಸಬೇಕು. ಬೀಡಾಡಿ ಪ್ರಾಣಿಗಳ ಆಶ್ರಯ ತಾಣಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಅದರ ಪರಿಣಾಮವಾಗಿ ಉಂಟಾಗಬಹುದಾದ ಅಪಾಯಗಳನ್ನು ತಡೆಯುವ ಉದ್ದೇಶದಿಂದ ಅವುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಈಗಾಗಲೇ ರೈಲು ಹಾಗೂ ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಬೀದಿ ನಾಯಿಗಳ ಸಂಖ್ಯೆಯು 4,405 ಇದೆ ಎಂದು ಗುರುತಿಸಲಾಗಿದೆ. ಪ್ರತಿಯೊಂದು ಸಂಸ್ಥೆಗಳಿಗೂ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಕೆಲವು ಸಂಸ್ಥೆಗಳು ಅವುಗಳ ನಿಯಂತ್ರಣಕ್ಕೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡದೇ ಇದ್ದಲ್ಲಿ ಕೂಡಲೇ ನೇಮಕ ಮಾಡಬೇಕೆಂದು ತಿಳಿಸಿದರು.
ರೇಬೀಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಅಥವಾ ಆಕ್ರಮಣಕಾರಿಯಾಗಿರುವ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಬಿಡಲು ಅನುಕೂಲವಾಗುವಂತೆ ಪ್ರತೀ ತಾಲ್ಲೂಕಿನಲ್ಲೂ ಆಶ್ರಯ ತಾಣಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಾಕಿ ಉಳಿದಿರುವ ಬ್ರಹ್ಮಾವರ ಮತ್ತು ಹೆಬ್ರಿ ತಾಲ್ಲೂಕುಗಳಲ್ಲಿಯೂ ವಾರದೊಳಗಾಗಿ ಜಾಗ ಗುರುತಿಸಿ, ಆಶ್ರಯ ತಾಣಗಳನ್ನು ನಿರ್ಮಾಣ ಮಾಡಬೇಕು ಎಂದರು.
ಆಶ್ರಯ ತಾಣಗಳಲ್ಲಿ ಇರುವಂತಹ ನಾಯಿಗಳ ನಿರ್ವಹಣೆಗೆ ಯಾರಾದರೂ ದಾನಿಗಳು ಮುಂದೆ ಬಂದಲ್ಲಿ ದತ್ತು ಕಾರ್ಯಕ್ರಮದಡಿಯಲ್ಲಿ ಅವರ ಸಹಕಾರ ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ. ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ್ ಹಂಗರಗಿ ಉಪಸ್ಥಿತರಿದ್ದರು.