ADVERTISEMENT

ನಾಯಿಮರಿಗೆ ಗಾಲಿ ಗಾಡಿ ಆಸರೆ: ವಿದ್ಯಾರ್ಥಿನಿ ಪ್ರಿಯಾ ಕಾರ್ಯಕ್ಕೆ ಮೆಚ್ಚುಗೆ

ಜಾಲತಾಣದಲ್ಲಿ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 7:21 IST
Last Updated 24 ಜೂನ್ 2021, 7:21 IST
ಅಪಘಾತದಲ್ಲಿ ಹಿಂದಿನ ಎರಡು ಕಾಲುಗಳನ್ನು ಕಳೆದುಕೊಂಡಿರುವ ಬೀದಿ ನಾಯಿ
ಅಪಘಾತದಲ್ಲಿ ಹಿಂದಿನ ಎರಡು ಕಾಲುಗಳನ್ನು ಕಳೆದುಕೊಂಡಿರುವ ಬೀದಿ ನಾಯಿ   

ಕುಂದಾಪುರ: ಅಪಘಾತದಿಂದಾಗಿ ಎರಡು ಕಾಲುಗಳಿಗೆ ಗಾಯವಾಗಿ, ಸೊಂಟದ ಸ್ವಾಧೀನ ಕಳೆದುಕೊಂಡಿದ್ದ ಬೀದಿ ನಾಯಿ ಮರಿಗೆ ಕೃತಕ ಗಾಲಿಯ ಗಾಡಿ ಅಳವಡಿಸಿ ನಡೆದಾಡುವಂತೆ ಮಾಡಿದ ಎಂಬಿಎ ವಿದ್ಯಾರ್ಥಿನಿ ಪ್ರೀಯಾ ಹೊಸಂಗಡಿ ಅವರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಿಯಾ ಅವರು ಕುಂದಾಪುರ ಸಮೀಪದ ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ದ್ವೀತಿಯ ವರ್ಷದ ಎಂಬಿಎ ವಿದ್ಯಾರ್ಥಿನಿ. ಹೊಸಂಗಡಿ ಕೆಪಿಸಿಯಲ್ಲಿ ಉದ್ಯೋಗಿ ಆಗಿರುವ ರಾಮಸ್ವಾಮಿ ಹಾಗೂ ತಾಯಿ ಕೆ. ವೀಣಾ ಪೈ ದಂಪತಿ ಪುತ್ರಿ.

ಈಚೆಗೆ ಹೊಸಂಗಡಿ ಮನೆಯ ಸಮೀಪದ ರಸ್ತೆಯಲ್ಲಿ ಅಪರಿಚಿತ ವಾಹನವೊಂದು 4 ತಿಂಗಳ ನಾಯಿ ಮರಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿನ ಎರಡು ಕಾಲುಗಳಿಗೆ ಗಂಭೀರ ಗಾಯ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದು ಮೇಲೆ ಏಳದ ಸ್ಥಿತಿಯಲ್ಲಿ ನಾಯಿ ಮರಿ ಇತ್ತು.

ADVERTISEMENT

ಇಂತಹ ಸ್ಥಿತಿಯಲ್ಲಿ ಇದ್ದ ನಾಯಿ ಮರಿಯನ್ನು ಕಂಡ ಪ್ರಿಯಾ ಅವರು ಅದಕ್ಕೆ ತಿಂಡಿ ಹಾಕಿ ಮನೆಗೆ ಮರಳಿದ್ದರು. ಮರು ದಿನ ತೆವಳಿಕೊಂಡು ಮನೆ ಎದುರಿಗೆ ಬರುತ್ತಿದ್ದ ಸ್ಥಿತಿ ಕಂಡು ನಾಯಿಮರಿ ಮನೆಗೆ ತಂದು ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದ್ದಾರೆ. ‌ಅಂಟಿಬೈಟಿಕ್‌ ಮಾತ್ರೆಗಳಿಂದ ಗಾಯ ಗುಣವಾಗಬಹದು, ಆದರೆ, ನಡೆಯುವುದು ಕಷ್ಟ ಎಂದು ವೈದ್ಯರು ಸಲಹೆ ನೀಡಿದ್ದರು.

ನಾಯಿ ಮರಿ ಚಿಕಿತ್ಸೆಯಿಂದ ಚೇತರಿಕೆ ಕಂಡರು ನಡೆದಾಡುವಾಗ ಗಾಯಗಳಾಗುತ್ತಿದ್ದವು. ನಾಯಿ ಮರಿಯನ್ನು ನಡೆಯುವಂತೆ ಮಾಡಬೇಕು ಎಂಬ ಹಂಬಲದಿಂದ ಪ್ರಿಯಾ ಅವರು ಆನ್‌ಲೈನ್ ಮೂಲಕ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಗಾಲಿ ಗಾಡಿ ಬೆಂಬಲದಿಂದ ನಡೆಯಲು ಸಾಧ್ಯ ಎನ್ನುವ ವಿಡಿಯೊವೊಂದರಿಂದ ಮಾಹಿತಿ ಪಡೆದುಕೊಂಡು, ಬೆಲೆ ದುಬಾರಿ ಎಂಬ ಕಾರಣಕ್ಕೆ ಸ್ವಯಂ ಸರಳ ತಂತ್ರಜ್ಞಾನದ ಮೂಲಕ ಗಾಲಿ ಗಾಡಿ ಮಾಡುವ ನಿರ್ಧಾರಕ್ಕೆ ಬಂದಿದ್ದರು.

ಮಗಳ ನಿರ್ಧಾರಕ್ಕೆ ಸಾಥ್ ನೀಡಿದ ತಂದೆ ರಾಮಸ್ವಾಮಿ ಅವರು ಅದಕ್ಕೆ ಬೇಕಾಗುವ ಗಾಲಿ, ಬೆಲ್ಟ್ ಹಾಗೂ ಪೈಪ್‌ ಪೂರೈಕೆ ಮಾಡಿದ್ದರು. ₹1,300 ವೆಚ್ಚದಲ್ಲಿ ನಾಯಿ ಮರಿ ಓಡಾಟಕ್ಕೆ ಗಾಲಿ ಗಾಡಿ ತಯಾರಿಸಿದ್ದಾರೆ. ಗಾಲಿ ಗಾಡಿ ಮೂಲಕ ನಾಯಿ ಮರಿಗೆ ಕಟ್ಟುವ ಮೂಲಕ ಅಭ್ಯಾಸ ಮಾಡಿಸಲಾಗಿದೆ. ಪ್ರಿಯಾ ಅವರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು ನಾಯಿ ಮರಿ ಯಾವುದೇ ಆತಂಕ ಇಲ್ಲದೆ ಓಡಾಡುತ್ತಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

‘ನಾಯಿಮರಿ ಓಡಾಟ ಖುಷಿ ತಂದಿದೆ’
ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ನಾಯಿ ಮರಿ ನಡೆದಾಡುವಂತೆ ಮಾಡುವ ದೊಡ್ಡ ಸವಾಲು ನನ್ನ ಮುಂದೆ ಇತ್ತು. ತಂದೆಯ ಸಹಕಾರದಿಂದ ಸರಳ ತಂತ್ರಜ್ಞಾನದಲ್ಲಿ ಗಾಲಿ ಗಾಡಿ ತಯಾರಿಸಿದ್ದು, ಅದನ್ನು ನಾಯಿಗೆ ಹಾಕಲಾಗಿದೆ. ನಾಯಿ ಯಾವುದೇ ಅಡ್ಡಿ ಆತಂಕ ಇಲ್ಲದೆ ಓಡಾಡುವುದನ್ನು ನೋಡಿ ಖುಷಿಯಾಗುತ್ತಿದೆ ಎಂದುಎಂಬಿಎ ವಿದ್ಯಾರ್ಥಿನಿ ಪ್ರಿಯಾ ಹೊಸಂಗಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.