ADVERTISEMENT

ಬಸ್‌ಗಳಲ್ಲಿ ಸೀಟು ಸಿಗುವುದಿಲ್ಲ, ಮನೆಗೆ ಹೋಗುವುದು ಹೇಗೆ: ವಿದ್ಯಾರ್ಥಿನಿ ಬೇಸರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:56 IST
Last Updated 20 ಏಪ್ರಿಲ್ 2021, 16:56 IST
ಆಸನಗಳ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಬಸ್‌ಗಳ ವಿರುದ್ಧ ಸೋಮವಾರ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್‌ ಬಸ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದರು.
ಆಸನಗಳ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಬಸ್‌ಗಳ ವಿರುದ್ಧ ಸೋಮವಾರ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್‌ ಬಸ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದರು.   

ಉಡುಪಿ: ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಬಸ್‌ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನಡೆಗೆ ವಿದ್ಯಾರ್ಥಿನಿಯೊಬ್ಬಳು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೊ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿದೆ.

ಉಡುಪಿಯಿಂದ ಸಿದ್ದಾಪುರಕ್ಕೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದು, ‘ದೂರದ ಹಳ್ಳಿಯಿಂದ ಕಾಲೇಜಿಗೆ ಬಂದಿದ್ದು, ಊರಿಗೆ ತೆರಳಲು ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲ. ಅರ್ಧತಾಸಿಗೆ ಒಂದು ಬಸ್‌ ಬಂದರೂ, ಪ್ರಯಾಣಿಕರು ಹೆಚ್ಚಾಗಿರುವುದರಿಂದ ಸೀಟು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹುಡುಗಿರಿಯರು ಎಷ್ಟು ಹೊತ್ತು ನಿಲ್ದಾಣದಲ್ಲಿ ಕಾಯಬೇಕು ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

ಮನೆಗೆ ತೆರಳಲು ಕನಿಷ್ಠ ಒಂದೂವರೆ ತಾಸು ಬೇಕು. ಜಿಲ್ಲಾಧಿಕಾರಿ ಏಕಾಏಕಿ ಬಸ್‌ನಿಂದ ಕೆಳಗಿಳಿಸಿ ಹೋದರು. ಕೇಳಿದರೆ ಬೇರೆ ಬಸ್‌ನಲ್ಲಿ ಹೋಗಲು ಸೂಚಿಸಿದರು. ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿರುವಾಗ ಮನೆ ತಲುಪುವುದು ಹೇಗೆ. ತಡವಾಗಿ ಮನೆಗೆ ಹೋದರೆ ಪೋಷಕರು ಪ್ರಶ್ನಿಸುವುದಿಲ್ಲವೇ ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಬೇಸರ ಹೊರಹಾಕಿದ್ದಾಳೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್‌ ‘ಕೋವಿಡ್‌ ಮಾರ್ಗಸೂಚಿ ಪ್ರಕಾರ ಬಸ್‌ಗಳಲ್ಲಿ ಆಸನಗಳ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವಿಲ್ಲ. ಸೋಮವಾರ ಕೆಲವು ಬಸ್‌ಗಳಲ್ಲಿ ಅಂತರ ಪಾಲನೆಯಾಗದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪರ್ಯಾಯ ಬಸ್‌ ವ್ಯವಸ್ಥೆ ಮಾಡಲಾಯಿತು’ ಎಂದರು.

ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆ ಇದ್ದರೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಆದರೆ, ನಿಗಧಿಗಿಂತ ಹೆಚ್ಚು ಪ್ರಯಾಣಿಕರು ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.