ADVERTISEMENT

ಉಡುಪಿ: ಹಿಜಾಬ್ ಧರಿಸಿದ ಕಾರಣಕ್ಕೆ ಪ್ರವೇಶ ನಿರಾಕರಣೆ, ಆರೋಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 13:46 IST
Last Updated 31 ಡಿಸೆಂಬರ್ 2021, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ 6 ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿದ ಮುಸ್ಲಿಂ ವಿದ್ಯಾರ್ಥಿನಿಯರು ‘ಕಳೆದ ವರ್ಷ ವಿಜ್ಞಾನ ವಿಭಾಗದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿತ್ತು. ಈ ವರ್ಷ ಅನುಮತಿ ನೀಡುತ್ತಿಲ್ಲ. ಹಿಜಾಬ್ ಹಾಕಿದ್ದಕ್ಕೆ ತರಗತಿಗೆ ಸೇರಿಸುತ್ತಿಲ್ಲ. ಹಾಜರಾತಿಯನ್ನೂ ನೀಡುತ್ತಿಲ್ಲ. ಮೂರು ದಿನಗಳಿಂದ ಕೊಠಡಿಯ ಹೊರಗೆ ನಿಂತು, ಅಲ್ಲಿಯೇ ಊಟಮಾಡಿ ಮನೆಗೆ ತೆರಳುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.

‘ಪೋಷಕರನ್ನು ಕಾಲೇಜಿಗೆ ಕರೆದುಕೊಂಡು ಬರಲು ಪ್ರಾಂಶುಪಾಲರು ಸೂಚಿಸಿದ್ದರು. ಕರೆದುಕೊಂಡು ಬಂದರೆ ಮಾತನಾಡದೆ ಕಡೆಗಣಿಸಲಾಗುತ್ತಿದೆ. ಹಾಜರಾತಿ ಕೊರತೆ ಎದುರಾಗುವ ಭೀತಿ ಎದುರಾಗಿದೆ’ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

ADVERTISEMENT

ಸುದ್ದಿ ತಿಳಿಯುತ್ತಿದ್ದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಕಾಲೇಜಿಗೆ ಭೇಟಿನೀಡಿ, ‘ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಹಿಜಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರ ಹಾಕಿರುವುದು ಖಂಡನೀಯ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಮುಕ್ತವಾಗಿ ಧರ್ಮ ಪ್ರತಿಪಾದಿಸುವ, ಆಚರಿಸುವ ಹಕ್ಕು ನೀಡಲಾಗಿದೆ. ಮುಸ್ಲಿಂ ಮಹಿಳೆ ಹಿಜಾಬ್ ಧರಿಸುವುದು ಧಾರ್ಮಿಕ ನಂಬಿಕೆಯಾಗಿದ್ದು, ಹಕ್ಕನ್ನು ಕಸಿದುಕೊಳ್ಳಬಾರದು’ ಎಂದು ಒತ್ತಾಯಿಸಿದರು.

ಘಟನೆ ಸಂಬಂಧ ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಯು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ.

ಎಸ್‌ಡಿಪಿಐ ಖಂಡನೆ: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಗೆ ಪ್ರವೇಶ ನಿರಾಕರಣೆ ಮಾಡಿರುವ ಪ್ರಾಂಶುಪಾಲರ ಕ್ರಮ ಖಂಡನೀಯ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತಿಳಿಸಿದೆ.

ಹಿಜಾಬ್ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ನಮ್ರತೆಯ ಚಿಹ್ನೆಯಾಗಿದೆ. ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಆಚರಿಸುವ ಮೂಲಭೂತ ಹಕ್ಕಿನ ಭಾಗವಾಗಿದೆ. ಕಾಲೇಜು ಪ್ರಾಂಶುಪಾಲರ ಫ್ಯಾಸಿಸ್ಟ್ ಧೋರಣೆ ಖಂಡನೀಯ. ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡುವುದಾಗಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ನಝೀರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.