ADVERTISEMENT

ಪಿಯುಸಿ ಪರೀಕ್ಷೆ ಬರೆದ 10254 ವಿದ್ಯಾರ್ಥಿಗಳು

ಮೊದಲ ದಿನ 142 ಮಂದಿ ಗೈರು, ಪರೀಕ್ಷಾ ಕೇಂದ್ರಗಳಿಗೆ ಭದ್ರತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:50 IST
Last Updated 4 ಮಾರ್ಚ್ 2020, 14:50 IST
ಪಿಯುಸಿ ಪರೀಕ್ಷೆ ಆರಂಭವಾಗುವ ಮುನ್ನ ಕಾಲೇಜು ಮುಂಭಾಗ ಕೊನೆಯ ಕ್ಷಣದ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿನಿಯರು.
ಪಿಯುಸಿ ಪರೀಕ್ಷೆ ಆರಂಭವಾಗುವ ಮುನ್ನ ಕಾಲೇಜು ಮುಂಭಾಗ ಕೊನೆಯ ಕ್ಷಣದ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿನಿಯರು.   

ಉಡುಪಿ: ಜಿಲ್ಲೆಯಾದ್ಯಂತ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನವಾದ ಬುಧವಾರ ಇತಿಹಾಸ, ಭೌತಶಾಸ್ತ್ರ ಹಾಗೂ ಮೂಲ ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಉಡುಪಿ ತಾಲ್ಲೂಕಿನ ಪೂರ್ಣಪ್ರಜ್ಞ, ಎಂಜಿಎಂ, ಮಿಲಾಗ್ರೀಸ್‌, ಸಂತಮೇರಿ, ಎಸ್‌ಎಂಎಸ್‌, ವಿವೇಕ, ಉಡುಪಿ, ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕಿಯರ ಕಾಲೇಜು, ನ್ಯಾಷನಲ್‌, ಎಸ್‌ವಿಎಸ್‌ ಹಾಗೂ ವಿದ್ಯೋದಯ ಶಾಲೆಗಳಲ್ಲಿ ಪರೀಕ್ಷೆಗಳು ನಡೆದವು.

ಕಾರ್ಕಳ ತಾಲ್ಲೂಕಿನ ಭುವನೇಂದ್ರ, ಹೆಬ್ರಿ, ಕಾರ್ಕಳ, ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್‌ವಿಟಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕುಂದಾಪುರ ತಾಲ್ಲೂಕಿನ ಭಂಡಾರ್ಕರ್ಸ್‌, ಕುಂದಾಪುರ, ಬೈಂದೂರು, ಬಿದ್ಕಲ್‌ಕಟ್ಟೆ, ನಾವುಂದ, ಕೋಟೇಶ್ವರ, ಶೀರೂರು, ವಂಡ್ಸೆ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಆರ್.ಎನ್‌ ಶೆಟ್ಟಿ ಕಾಲೇಜುಗಳ ಕೇಂದ್ರಗಳನ್ನು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ADVERTISEMENT

ಜಿಲ್ಲೆಯಲ್ಲಿ ಇತಿಹಾಸ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದ 5,223 ವಿದ್ಯಾರ್ಥಿಗಳ ಪೈಕಿ 5,100 ವಿದ್ಯಾರ್ಥಿಗಳು ಹಾಜರಾದರೆ, 123 ಮಂದಿ ಗೈರಾಗಿದ್ದರು. ಭೌತಶಾಸ್ತ್ರ ವಿಷಯದಲ್ಲಿ 4,968 ವಿದ್ಯಾರ್ಥಿಗಳು ಹಾಜರಾದರೆ, 18 ಮಂದಿ ಗೈರಾಗಿದ್ದರು. ಬೇಸಿಕ್‌ ಗಣಿತದಲ್ಲಿ 186 ವಿದ್ಯಾರ್ಥಿಗಳು ಹಾಜರಾದರೆ ಒಬ್ಬರು ಮಾತ್ರ ಪರೀಕ್ಷೆ ಬರೆಯಲಿಲ್ಲ.

ಒಟ್ಟು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದ 10,396 ವಿದ್ಯಾರ್ಥಿಗಳ ಪೈಕಿ 10,254 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 142 ಮಂದಿ ಹಾಜರಾಗಿರಲಿಲ್ಲ.

ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ವಹಿಸಿತ್ತು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಸೇರಿದಂತೆ ಅಗತ್ಯ ಭದ್ರತೆ ಒದಗಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗಿತ್ತು.

ಪರೀಕ್ಷೆ ಆರಂಭವಾಗುವ ಅರ್ಧತಾಸು ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಇದ್ದರು. ನೋಟಿಸ್‌ ಬೋರ್ಡ್‌ನಲ್ಲಿ ಹಾಕಲಾಗಿದ್ದ ನೋಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆಗಳನ್ನು ಪರಿಶೀಲಿಸುತ್ತಿದ್ದ ದೃಶ್ಯ ಕಂಡುಬಂತು.

ನಕಲು ತಡೆಗೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಝೆರಾಕ್ಸ್‌ ಸೆಂಟರ್‌ಗಳನ್ನು ಮುಚ್ಚಲಾಗಿತ್ತು. ಮೊದಲ ದಿನ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.