ADVERTISEMENT

ಉಡುಪಿ: ಒಳಚರಂಡಿ ಕಾಮಗಾರಿ ಡಿಪಿಆರ್ ಸಲ್ಲಿಸಲು ಸಚಿವ ಬಿ.ಎ. ಬಸವರಾಜ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:59 IST
Last Updated 13 ಜುಲೈ 2020, 13:59 IST

ಉಡುಪಿ: ನಗರದಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವರು, ‘ಉಡುಪಿ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆದು 14 ವರ್ಷಗಳಾಗಿದ್ದು, ಹೊಸ ವಿನ್ಯಾಸದೊಂದಿಗೆ ಕಾಮಗಾರಿಗೆ ಅನುಮೋದನೆ ನೀಡುವಂತೆ ಶಾಸಕ ರಘುಪತಿ ಭಟ್‌ ಪ್ರಸ್ತಾವ ಮುಂದಿಟ್ಟಿದ್ದಾರೆ. ಯೋಜನೆಯ ಡಿಪಿಆರ್‌ ಮಾಡಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದರು.

ಅದೇರೀತಿ, ಕುಡಿಯುವ ನೀರು ಸರಬರಾಜು ಯೋಜನೆಗೂ ಡಿಪಿಎಆರ್ ಸಿದ್ಧಪಡಿಸಿ, ಯೋಜನೆಯ ವೆಚ್ಚವನ್ನು ನಗರಸಭೆಯಿಂದ ಭರಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಯಾವುದೇ ಬಡಾವಣೆಗಳು ನಿರ್ಮಿಸಿಲ್ಲ ಎಂಬ ವಿಚಾರ ತಿಳಿದು ಬೇಸರವಾಯಿತು. ಉಡುಪಿಯಂತಹ ನಗರಕ್ಕೆ ಹೊಸ ಬಡಾವಣೆಗಳ ನಿರ್ಮಾಣ ಅಗತ್ಯವಾಗಿ ಬೇಕಿದೆ. ಸರ್ಕಾರದ ಹೊಸ ನಿಯಮದಂತೆ ಖಾಸಗಿಯವರಿಂದ ಭೂಮಿ ಪಡೆದು ಶೇ 50–50 ಅನುಪಾತದಲ್ಲಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ಹಂಚಿಕೆ ಮಾಡುವಂತೆ ಸೂಚಿಸಿದ್ದೇನೆ ಎಂದರು.

ಕಾರ್ಕಳ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯಾಪ್ತಿಯಲ್ಲಿ ಮುಕ್ತಾಯವಾಗಿರುವ ಕಾಮಗಾರಿ ಉದ್ಘಾಟನೆಗೆ ಸಿಎಂ ಅವರ ದಿನಾಂಕ ಪಡೆಯಲಾಗುವುದು. ಕಾಪುವಿನಲ್ಲಿ ₹ 46 ಕೋಟಿ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್‌ಗೆ ಒಪ್ಪಿಗೆ ನೀಡಲಾಗಿದೆ. ಯೋಜನೆಗೆ ಭೂಮಿ ಸಮಸ್ಯೆಯಿದ್ದು, ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.ಕಾಪುವಿನಲ್ಲಿ ಅನಧಿಕೃತ ಬಡಾವಣೆಗಳ ಸಕ್ರಮಕ್ಕೆ ಮನವಿ ಬಂದಿದ್ದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಪತ್ರಕರ್ತರಿಗೆ ಶೇ 5 ಮೀಸಲು:ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸಿದರೆ ಪತ್ರಕರ್ತರಿಗೆ ಶೇ 5 ರಷ್ಟು ನಿವೇಶನ ಮೀಸಲಿಡಲು ನಿರ್ಧರಿಸಲಾಗಿದ್ದು, ಎರಡ್ಮೂರು ದಿನಗಳಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದು ಸಚಿವ ಬಿ.ಎ.ಬಸವರಾಜ ಹೇಳಿದರು.

ಉಡುಪಿ ನಗರಾಭಿವೃದ್ಧಿಪ್ರಾಧಿಕಾರದಿಂದ ₹ 11 ಕೋಟಿ ಕೆರೆ ಅಭಿವೃದ್ದಿ ಶುಲ್ಕ ಸಂಗ್ರಹಿಸಿದ್ದು, ₹ 5 ಕೋಟಿ ವೆಚ್ಚದಲ್ಲಿ 19 ಕೆರೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ₹ 5 ಕೋಟಿ ಕಾಮಗಾರಿಗೆ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಪ್ರಭಾರ ಆಯುಕ್ತ ರಾಜು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.