ADVERTISEMENT

ದೇಶದಲ್ಲಿ ಕೊಲೆಗಳಿಗಿಂತ ಆತ್ಮಹತ್ಯೆಗಳು ಹೆಚ್ಚು: ಸಚಿವ ಸತ್ಯಪಾಲ್ ಸಿಂಗ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 13:46 IST
Last Updated 27 ಸೆಪ್ಟೆಂಬರ್ 2018, 13:46 IST
ಟಿ.ಎಂ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ‘ನಾಯಕತ್ವ’ ಉಪನ್ಯಾಸ ಸರಣಿಯ 26ನೇ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಸತ್ಯಪಾಲ್ ಸಿಂಗ್ ಮಾತನಾಡಿದರು.ಪ್ರಜಾವಾಣಿ ಚಿತ್ರ
ಟಿ.ಎಂ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ‘ನಾಯಕತ್ವ’ ಉಪನ್ಯಾಸ ಸರಣಿಯ 26ನೇ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಸತ್ಯಪಾಲ್ ಸಿಂಗ್ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ದೇಶದಲ್ಲಿ ಕೊಲೆಗಳಿಗಿಂತ ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸಂಖ್ಯೆ ಮೂರುಪಟ್ಟು ಹೆಚ್ಚು ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

ಮಣಿಪಾಲದ ಟಿ.ಎಂ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಆಯೋಜಿಸಿದ್ದ ನಾಯಕತ್ವ ಉಪನ್ಯಾಸ ಸರಣಿಯ 26ನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಅಮೂಲ್ಯವಾದ ಮಾನವ ಸಂಪನ್ಮೂಲ ಅನವಶ್ಯಕವಾಗಿ ನಾಶವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದುಕಿನ ಮಹತ್ವವನ್ನು ಹೇಳಿಕೊಡುವ ಪಾಠ ಇಲ್ಲದಿರುವುದೇ ಇದಕ್ಕೆ ಕಾರಣ. ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು ಸೇರಿದಂತೆ ಸುಶಿಕ್ಷಿತರೇ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಬದುಕಿನ ಬೆಲೆ ಅರಿಯದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.‌

ADVERTISEMENT

ಆತ್ಮಹತ್ಯೆ ಒಳಗಾಗುವರು ವೃತ್ತಿಯ ಅಭಿವೃದ್ಧಿಯೇ ಶ್ರೇಷ್ಠ ಎಂದು ಬಲವಾಗಿ ನಂಬಿರುತ್ತಾರೆ. ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗದಿದ್ದರೆ ಬದುಕು ಮುಕ್ತಾಯವಾದಂತೆ ಎಂಬ ಮನೋಭಾವನೆಯನ್ನು ತಳೆಯುತ್ತಿರುವುದು ಆತ್ಮಹತ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ವೃತ್ತಿಯ ಅಭಿವೃದ್ಧಿಗಿಂತಲೂ, ನಾವು ಮಾಡುವ ಕೆಲಸ ನಮಗೆ ಸಂತೋಷ ಕೊಡುವಂತಿರಬೇಕು ಎಂದು ಸಚಿವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಯಕರು ಹುಟ್ಟುವುದಿಲ್ಲ, ಸೃಷ್ಟಿಯಾಗುತ್ತಾರೆ ಎಂಬ ಮಾತಿದೆ. ನಾಯಕರಾಗಬೇಕಾದರೇ ಕಠಿಣ ದುಡಿಮೆ, ಬದ್ದತೆ ಮತ್ತು ಸಮರ್ಪಣಾ ಮನೋಭಾವ ಬೇಕು. ನಾಯಕನಾದವನು ಮಾತನ್ನು ಅತ್ಯಂತ ಗಟ್ಟಿಧನಿಯಲ್ಲಿ ಹೇಳಬೇಕು. ಮಾತು ಹೃದಯ ಹಾಗೂ ಮಿದುಳಿನಿಂದ ಬರಬೇಕು ಎಂದರು.

ಪ್ರಪಂಚದಲ್ಲಿ ಉಪಯೋಗ ಇಲ್ಲದ ಜೀವಿಯೇ ಇಲ್ಲ. ಅದರಲ್ಲೂ ಮನುಷ್ಯ ಜನ್ಮ ಮಹತ್ವದ್ದು. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸಬಲ್ಲ. ಎಂತಹ ಕ್ಲಿಷ್ಟ ವಿಚಾರಗಳನ್ನು ಅರ್ಥೈಸಿಕೊಳ್ಳಬಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಜೀವಿಗಳಿಗಿಂತ ಬುದ್ಧಿವಂತ. ಮನುಷ್ಯನಿಗೆ ಪರ್ಯಾಯವಾಗಿ ಮತ್ತೊಂದು ಜೀವಿಯನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಜಗತ್ತು ಅತ್ಯಂತ ಸುಂದರ ಹಾಗೂ ಅಷ್ಟೇ ವೈಜ್ಞಾನಿಕವಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ಗುರಿ ಹಾಗೂ ಉದ್ದೇಶವನ್ನಿಟ್ಟುಕೊಂಡು ಯಶಸ್ಸು ಸಾಧಿಸಬೇಕು. ಜೀವನದಲ್ಲಿ ಸಂತೋಷವನ್ನು ಗಳಿಸಬಹುದು. ಯಶಸ್ವಿ ಬದುಕಿಗೆ ಜಾಗತಿಕ ಪ್ರಜ್ಞೆ, ಆತ್ಮವಿಶ್ವಾಸ, ಸಂವಹನ, ಬದ್ಧತೆ, ನಡವಳಿಕೆ, ಸಂಪರ್ಕ, ಸಾಮೂಹಿಕ ಹೊಣೆಗಾರಿಕೆ ಎಂಬ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವ ಸತ್ಯಪಾಲ್ ಸಿಂಗ್ ತಿಳಿಸಿದರು

ಕಾರ್ಯಕ್ರಮದಲ್ಲಿ ಟ್ಯಾಪ್ಮಿಯ ನಿರ್ದೇಶಕ ಮಧುವೀರ ರಾಘವನ್, ಪ್ರಾಧ್ಯಾಪಕ ರಾಜೀವ್ ಶಾಹ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.