ADVERTISEMENT

25ರಂದು ಆಕಾಶದಲ್ಲಿ ಎರಡು ತ್ರಿಕೋನ ಕೌತುಕ; ಖಗೋಳಾಸಕ್ತರಿಗೆ ವೀಕ್ಷಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:17 IST
Last Updated 24 ಸೆಪ್ಟೆಂಬರ್ 2020, 4:17 IST

ಉಡುಪಿ: ಸೆ.25ರಂದು ಆಕಾಶದಲ್ಲಿ ಎರಡು ತ್ರಿಕೋನಗಳ ಕೌತುಕವನ್ನು ಕಾಣಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್‌, ಹಾಗೂ ಪೂರ್ಣ ಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ವೇದಶ್ರಿ ಉಪಾಧ್ಯ ತಿಳಿಸಿದ್ದಾರೆ.

ಸೆ.25ರಂದು ಗುರು-ಚಂದ್ರ–ಶನಿ ಗ್ರಹಗಳ ತ್ರಿಕೋನಾಕಾರ ಹಾಗೂ ಬೇಸಿಗೆ ತ್ರಿಕೋನ ನಕ್ಷತ್ರಗಳ ಗುಂಪನ್ನು ಕಣ್ತುಂಬಿಕೊಳ್ಳಬಹುದು. ಈ ಖಗೋಳ ಕೌತುಕವನ್ನು ನವೆಂಬರ್‌ನಲ್ಲಿ ಮತ್ತೆ ನೋಡಬಹುದು ಎಂದು ತಿಳಿಸಿದ್ದಾರೆ.

ವೀಣಾ ನಕ್ಷತ್ರಪುಂಜದ ಅಭಿಜಿತ್ (ವೇಗಾ), ರಾಜಹಂಸದ ಹಂಸಾಕ್ಷಿ (ಡೇನೆಬ್) ಹಾಗೂ ಗರುಡ ನಕ್ಷತ್ರ ಪುಂಜದ ಶ್ರವಣ (ಆಲ್ಟೇರ್) ನಕ್ಷತ್ರಗಳಿಂದ ಆಕಾಶದಲ್ಲಿ ತ್ರಿಕೋನಾಕಾರ ಕಾಣಬಹುದು. ಅತಿ ಪ್ರಕಾಶಮಾನವಾದ ಈ ನಕ್ಷತ್ರಗಳ ಗುಂಪನ್ನು ‘ಬೇಸಿಗೆ ತ್ರಿಕೋನ’ ಎನ್ನಲಾಗುತ್ತದೆ.

ADVERTISEMENT

ಈ ತ್ರಿಕೋನ ಜನವರಿಯಲ್ಲಿ ಸೂರ್ಯೋದಯದ ಮುನ್ನ ಪೂರ್ವ ದಿಕ್ಕಿನಲ್ಲಿದ್ದು, ಪ್ರತಿದಿನ ಪಶ್ಚಿಮದ ಕಡೆ ಹಾದು ಹೋಗುತ್ತದೆ. ಜುಲೈನಲ್ಲಿ ಮುಂಜಾನೆ ಕಾಣಬಹುದು. ಆಗಸ್ಟ್‌ನ ಕೊನೆಯಲ್ಲಿ ಸೂರ್ಯಾಸ್ತದ ನಂತರ ಪೂರ್ವ ಆಕಾಶದಲ್ಲಿ ಕಾಣಬಹುದು. ಡಿಸೆಂಬರ್‌ನಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣುಬಹುದು. ಸೆಪ್ಟೆಂಬರ್‌ನಲ್ಲಿ ಸಂಜೆಯ ಹೊತ್ತಿಗೆ ಕಾಣುತ್ತದೆ.

ಬೇಸಿಗೆ ತ್ರಿಕೋನ ಹೆಸರು ಬಂದಿದ್ದು:

ಭೂಮಧ್ಯ ರೇಖೆಯ ಮೇಲ್ಭಾಗದವರಿಗೆ ಬೇಸಿಗೆ ಕಾಲದ ಮಧ್ಯ ರಾತ್ರಿಯಲ್ಲಿ ಈ ತ್ರಿಕೋನಾಕಾರ ನೆತ್ತಿಯ ಮೇಲೆ ಕಾಣುವುದರಿಂದ ‘ಬೇಸಿಗೆ ತ್ರಿಕೋನ ಎಂಬ ಹೆಸರು ಬಂದಿದೆ.

ಗುರುತಿಸುವುದು ಹೇಗೆ:

ಸೂರ್ಯಾಸ್ತದ ನಂತರ ಪೂರ್ವ ಆಕಾಶದಿಂದ ಪಶ್ಚಿಮದ ಕಡೆ ನೋಡುವಾಗ ಪ್ರಕಾಶಮಾನವಾದ ಶ್ರವಣನಕ್ಷತ್ರ ಕಾಣುತ್ತದೆ. ಈ ನಕ್ಷತ್ರದ ಉತ್ತರಕ್ಕೆ ಅತಿ ಪ್ರಕಾಶಮಾನವಾದ ಅಭಿಜಿತ್ ನಕ್ಷತ್ರ ಕಾಣುತ್ತದೆ. ಇದರ ಈಶಾನ್ಯಕ್ಕೆ ಹಂಸಾಕ್ಷಿ ಕಾಣಬಹುದು.

ಸೆ.25ರಂದು ಮತ್ತೊಂದು ಅಚ್ಚರಿ ವೀಕ್ಷಣೆ ಮಾಡಬಹುದು. ಅಂದುಗುರು, ಶನಿ ಗ್ರಹಗಳ ಸಮೀಪದಲ್ಲಿ ಚಂದ್ರನನ್ನು ನೋಡಬಹುದು.ಗುರು ಮತ್ತು ಶನಿ ಗ್ರಹಗಳ ನಡುವೆ ಕಡಿಮೆ ಅಂತರದಲ್ಲಿ ಹಾದು ಹೋಗುವ ಚಂದ್ರನು ಎರಡು ಗ್ರಹಗಳ ಮಧ್ಯದಲ್ಲಿ ಕೆಳಗೆ ಕಾಣುತ್ತಾನೆ. ಇದು ಕೂಡ ತ್ರಿಕೋನಾಕೃತಿಯಲ್ಲಿ ಕಾಣುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.