ADVERTISEMENT

ಬಿಜೆಪಿ ಕಾರ್ಯಕರ್ತರ ಕೊಲೆಗೆ ವ್ಯವಸ್ಥಿತ ಸಂಚು: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:17 IST
Last Updated 30 ಜುಲೈ 2022, 5:17 IST
ಕುಂದಾಪುರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಕುಂದಾಪುರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಕುಂದಾಪುರ: ಜಾತಿಗೆ ಸೀಮಿತವಾಗಿ ಧರ್ಮಾಂಧತೆ ನಿಂತಿಲ್ಲ. ಎಲ್ಲ ಜಾತಿ, ಹಿಂದುತ್ವವಾದಿಗಳು, ಬಿಜೆಪಿ ಕಾರ್ಯ
ಕರ್ತರ ಕೊಲೆ ಮಾಡುವಂತಹ ವ್ಯವಸ್ಥಿತ ಸಂಚುಗಳು ನಡೆಯುತ್ತಿವೆ. ಇದರ ಹಿಂದಿರುವ ಶಕ್ತಿಗಳನ್ನು ಭೇದಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಿಜೆಪಿ ಯುವ ಮುಖಂಡರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರಿಗೆ ಕೋಪ, ನೋವಾದಾಗ ಇವೆಲ್ಲವೂ ಸಹಜ. ನಾವು ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಡಿ ಗೆಲ್ಲಿಸಿದ್ದೇವೆ. ನಮ್ಮ ನೋವನ್ನು ತೋಡಿಕೊಳ್ಳಲು ನಾವೆಲ್ಲಾ ರಾಜೀನಾಮೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರ ಆಕ್ರೋಶದ ಹಿಂದೆ ನಿಜವಾದ ಕಳಕಳಿ ಇದೆ ಎಂದ ಅವರು ನಮ್ಮದೇ ಕಾರ್ಯಕರ್ತರು, ನಮ್ಮನ್ನು ಗೆಲ್ಲಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಕಾರ್ಯಕರ್ತರು ಹೇಳಿರುವ ವಿಚಾರದ ಬಗ್ಗೆ
ಗಮನ ಕೊಡುತ್ತೇವೆ ಎಂಬ ವಿಶ್ವಾಸದ ಮಾತನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಹಾಗೂ ಮುಖ್ಯಮಂತ್ರಿಗಳು ಹೇಳಿದ್ದು, ಎಲ್ಲವೂ ಸರಿಯಾಗಲಿದೆ ಎಂದರು.

ADVERTISEMENT

‘ಮುಖ್ಯಮಂತ್ರಿಗಳ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪ್ರತಿರೋಧವನ್ನು ಗಮನಿಸಿ ತಕ್ಷಣ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿ ಹೋಗಿದ್ದಾರೆ. ಹಿಂಸೆ ಯಾವ ಧರ್ಮದಲ್ಲಿ ನಡೆದರೂ ಸರ್ಕಾರ ಅದನ್ನು ಸಹಿಸುವುದಿಲ್ಲ. ಆಗಿರುವಂತಹ ಷಡ್ಯಂತರವನ್ನು ಭೇದಿಸಲು ಇಡೀ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದು ಬಿಟ್ಟರೆ ಇದಕ್ಕೆ ಬೇರೆ ಮಾರ್ಗಗಳಿಲ್ಲ. ಇಂತಹ ಮಾನಸಿಕತೆ ಇರುವವರು ತಲೆ ಎತ್ತಬಾರದು ಅನ್ನುವುದಷ್ಟೇ ಗುರಿ. ಅದಕ್ಕೋಸ್ಕರ ಪೊಲೀಸ್ ಬಲ, ಇಂಟೆಲಿಜೆನ್ಸಿ ಬಲವನ್ನು ಹೆಚ್ಚು ಮಾಡುತ್ತೇವೆ. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಜಾಗ್ರತೆ ವಹಿಸುತ್ತೇವೆ ಎಂದು ಅವರು ಹೇಳಿದರು.

‘ಸರ್ಕಾರ ಯಾರನ್ನೂ ಕೈ ಬಿಟ್ಟಿಲ್ಲ’

ಪರೇಶ್ ಮೇಸ್ತಾ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸರ್ಕಾರ ಯಾರನ್ನೂ ಕೈ ಬಿಟ್ಟಿಲ್ಲ. ಮೇಸ್ತಾ ಅವರ ತಂದೆ-ತಾಯಿ ನನ್ನ ಬಳಿ ಬಂದು ಮಾತನಾಡಿದ್ದಾರೆ. ಅವರಿಗೆ ಏನು ಸಹಾಯ ಮಾಡಬೇಕು ಮಾಡಿದ್ದೇನೆ. ಬೇರೊಂದು ಕಾರಣದಿಂದಾಗಿ ಒಂದಷ್ಟು ಸಮಯ ಕಾಯಬೇಕಾಯಿತು. ಮೇಸ್ತಾ ಅವರ ತಮ್ಮನಿಗೆ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದೇನೆ ಎಂದು ಕೋಟ ಹೇಳಿದ್ದಾರೆ.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.