ಕುಂದಾಪುರ: ಹೆತ್ತ ತಾಯಿ, ಜನ್ಮ ನೀಡಿದ ಭೂಮಿ ಹಾಗೂ ಶಿಕ್ಷಣ ನೀಡಿದ ಅಕ್ಷರ ದೇಗುಲದ ಖುಣಗಳನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಬೀಜಾಡಿಯ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವ ಸಮಾರಂಭದ ರಜತ ಪಥ ನೆರಳು ಬೆಳಕಿನ ಸಹಯಾನದ 2ನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ರಾತ್ರಿ ಸಾಧಕರ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರದ ಪಾಠ ಹೇಳಿ ಕೊಡಬೇಕು. ನಮ್ಮನ್ನು ಮನುಷ್ಯನಾಗಿಸಿ, ಸಮಾಜ ಸೇವೆ ಮಾಡಬೇಕು. ಬಡವರು, ಅಶಕ್ತರಿಗೆ ನೆರವು ನೀಡುವುದರಿಂದ ತೃಪ್ತಿ ಹಾಗೂ ಸಾರ್ಥಕತೆ ದೊರಕುತ್ತದೆ ಎಂದರು.
ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕೆದೂರು ಪ್ರಗತಿಪರ ಕೃಷಿಕ ರಾಮಕೃಷ್ಣ ಬಾಯಿರಿ ಅವರು ಅಂಗವಿಕಲರಿಗೆ ಗಾಲಿಕುರ್ಚಿ ವಿತರಿಸಿದರು. ಭರಮಸಾಗರ ಡಿವಿಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರದೀಪ್ ಡಿ.ವಿ.ಎಸ್, ಹೋಟೆಲ್ ಉದ್ಯಮಿ ಕೆ.ಎಚ್.ಮಂಜುನಾಥ್ ದೇವಾಡಿಗ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಶುಭ ಹಾರೈಸಿದರು.
ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಣೆ ಹಾಗೂ ಶಾಂತಿಧಾಮ ಪೂರ್ವ ಗುರುಕುಲಕ್ಕೆ ಕಪಾಟು ಹಸ್ತಾಂತರಿಸಲಾಯಿತು. ಬಸವರಾಜ ಹೊರಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಮಿತ್ರ ಸಂಗಮದ ಕಾರ್ಯದರ್ಶಿ ರಾಜೇಶ್ ಆಚಾರ್ ಬೀಜಾಡಿ, ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಂಕರನಾರಾಯಣ ಬಾಯಿರಿ, ಅಧ್ಯಕ್ಷ ದೀಪಾನಂದ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್ ಇದ್ದರು.
ಗಾಯಕ ಮಾಧವ ಬೀಜಾಡಿ ಪ್ರಾರ್ಥಿಸಿದರು. ಮಿತ್ರ ಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು.
ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಸಿ. ರಾಜೇಶ್ ನಿರೂಪಿಸಿದರು. ರಜತಮಹೋತ್ಸವ ಸಮಿತಿ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.