ADVERTISEMENT

ಶಿಕ್ಷಕರು ಸವಾಲು ಎದುರಿಸಿ ಮುನ್ನಡೆಯಿರಿ: ಐಸಾಕ್ ಲೋಬೊ ಪ್ರತಿಪಾದನೆ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:25 IST
Last Updated 7 ಸೆಪ್ಟೆಂಬರ್ 2025, 8:25 IST
ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು   

ಉಡುಪಿ: ‘ಇಂದಿನ ಯುಗದಲ್ಲಿ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದ್ದು, ಕೃತಕ ಬುದ್ದಿಮತ್ತೆ, ಸಾಮಾಜಿಕ ಒತ್ತಡ, ಮೌಲ್ಯಗಳ ಕುಸಿತದ ನಡುವೆಯೂ ಧೈರ್ಯದಿಂದ ಮುಂದೆ ಸಾಗಬೇಕಾದ ಅವಶ್ಯಕತೆ ಇದೆ’ ಎಂದು ಇಲ್ಲಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಸಂತೆಕಟ್ಟೆ ಸಮೀಪದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದ ಅಮೂಲ್ಯ ಸಭಾಂಗಣದಲ್ಲಿ ಕಥೋಲಿಕ್ ಎಜುಕೇಷನಲ್ ಸೊಸೈಟಿ, ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ಮೌಲ್ಯಗಳ ದೀಪಸ್ತಂಭಗಳಾಗುವುದರೊಂದಿಗೆ ಹೃದಯಗಳನ್ನು ರೂಪಿಸುವ ತಾಣಗಳಾಗಬೇಕು ಎಂದರು.

ಶಿಕ್ಷಕರು ಪಠ್ಯಪುಸ್ತಕ ಬೋಧಿಸುವವರಲ್ಲ, ಬದಲಾಗಿ ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ರೂಪಿಸುವವರು. ಕಥೋಲಿಕ್ ವಿದ್ಯಾಸಂಸ್ಥೆಗಳು ಬೌದ್ಧಿಕ ಕೌಶಲವಲ್ಲದೆ ನೈತಿಕ ಮೌಲ್ಯ, ವಿಶ್ವಾಸದ ಬೆಳಕನ್ನು ಹರಡುವ ಪೀಠಗಳಾಗಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೆಶ್ ಸಿ. ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟದಲ್ಲಿರಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದದು. ಶಿಕ್ಷಕರು ತೋರುವ ನಿಷ್ಠೆ, ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯೂ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.

ADVERTISEMENT

ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ದಯಾನಂದ ನಾಯ್ಕ್ ದಿಕ್ಸೂಚಿ ಭಾಷಣ ಮಾಡಿದರು. ನಿವೃತ್ತಿ ಹೊಂದಿದ ಶಿಕ್ಷಕ– ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿನ್ಸೆಂಟ್ ಆಳ್ವ, ಹೆರಾಲ್ಡ್ ಮೊನಿಸ್, ವಿಜಯ್ ಜೊಯ್ಸನ್ ಡಿಸೋಜ, ಸಿಸ್ಟರ್ ಪ್ರಮೀಳಾ ಶಾಂತಿ ಡಿಸೋಜ, ಎಲಿಝಾ ವಾಜ್, ಮೊತೇಶ್ ಮಥಾಯಸ್ ಸನ್ಮಾನಿತರನ್ನು ಪರಿಚಯಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಉಡುಪಿಯ ಶ್ರೇಯಾಂಸ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು.

ಕಥೊಲಿಕ ಎಜುಕೇಷನಲ್ ಸೊಸೈಟಿ ಕಾರ್ಯದರ್ಶೀರ್ಶಿ ವಿನ್ಸೆಂಟ್ ಕ್ರಾಸ್ತ ಸ್ವಾಗತಿಸಿದರು. ವಿಜಯ್ ಜೋಕಿಂ ಡಿಸೋಜ ವಂದಿಸಿದರು. ಸಿಸ್ಟರ್ ಅನಿತಾ ಡಿಸೋಜ, ಸವಿತಾ ಕುಮಾರಿ ಶೆಟ್ಟಿ ನಿರೂಪಿಸಿದರು.

ಶಿಕ್ಷಕರು ಬದ್ಧತೆ ನಿಷ್ಠೆ ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ. ಅವರು ದೇಶ ಕಟ್ಟುವ ಮುಂದಿನ ನಾಯಕರನ್ನು ರೂಪಿಸುವ ಜ್ಞಾನಿ– ವಿಜ್ಞಾನಿಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ ಜೆರಾಲ್ಡ್ ಐಸಾಕ್ ಲೋಬೊ ಧರ್ಮಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.