ADVERTISEMENT

ಶಿಕ್ಷಕರ ಮಹತ್ವ ಮಕ್ಕಳ ಮನಸ್ಸಿನಲ್ಲಿ ಮೂಡಿಸಿ

ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಿ: ಶಾಸಕ ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:09 IST
Last Updated 5 ಸೆಪ್ಟೆಂಬರ್ 2020, 14:09 IST
ನಗರದ ಸೇಂಟ್‌ ಸಿಸಿಲಿಸ್ ಪ್ರೌಢಶಾಲೆಯಲ್ಲಿ ಶನಿವಾರನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಗರದ ಸೇಂಟ್‌ ಸಿಸಿಲಿಸ್ ಪ್ರೌಢಶಾಲೆಯಲ್ಲಿ ಶನಿವಾರನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.   

ಉಡುಪಿ:ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿರುವಶಿಕ್ಷಕ ವೃತ್ತಿಯಲ್ಲಿ ಸಿಗುವ ಗೌರವ, ಪ್ರೀತಿ, ಆದರ ಬೇರೆ ಯಾವ ವೃತ್ತಿಯಲ್ಲಿ ಸಿಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬದುಕಿನ ಮೌಲ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಶನಿವಾರ ನಗರದ ಸೇಂಟ್‌ ಸಿಸಿಲಿಸ್ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಮುಂದಿನ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಯಾ ಶಾಲೆಯ ಮಕ್ಕಳಿಂದ ಆಚರಿಸಿ ನಂತರ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಚರಿಸಬೇಕು. ಶಿಕ್ಷಕರ ಪ್ರಾಮುಖ್ಯತೆ ಮಕ್ಕಳ ಮನಸ್ಸಿನಲ್ಲಿ ಮೂಡಬೇಕಾದರೆ ಪ್ರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಶಿಕ್ಷಕರ ಪ್ರಯತ್ನ ಶ್ರಮ ಬಹಳ ಮುಖ್ಯ. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ. ಶಿಕ್ಷಕರ ಜವಾಬ್ದಾರಿ, ಒತ್ತಡಗಳು ಹೆಚ್ಚಾಗಿವೆ. ಇವುಗಳ ಮಧ್ಯೆಯೂ ಶಿಕ್ಷಣದಲ್ಲಿ ಬದಲಾವಣೆಯಾಗಬೇಕಿದೆ. ಶಿಕ್ಷಕರು ಹೊಸ ಚಟುವಟಿಕೆ, ಬೋಧನಾ ಶೈಲಿ, ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಕ್ಕಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಲಿಸಲು ಸಾದ್ಯ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಜಗತ್ತಿನ ಎಲ್ಲ ಆವಿಷ್ಕಾರಗಳಿಗೆ ಮೂಲ ಗುರುವಾಗಿದ್ದು, ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲು ಶಿಕ್ಷಕರು ಕಾರಣ ಎಂದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ‘ಶಿಕ್ಷಣದಲ್ಲಿ ಗುರು, ಗುರಿ ಬಹಳ ಮುಖ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ಒಳ್ಳೆಯ ಗುರುಗಳು ಸಿಕ್ಕರೆ ಸದಾ ಸ್ಮರಣೀಯರಾಗಿರುತ್ತಾರೆ. ಮುಂದಿನ ಸವಾಲುಗಳನ್ನು ಎದುರಿಸಲು ಪ್ರಸ್ತುತ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು. ಶಿಕ್ಷಕರು ಸರ್ವಪಲ್ಲಿ ರಾಧಕೃಷ್ಣನ್ ಮತ್ತು ಅಬ್ದುಲ್ ಕಲಾಂ ಅವರ ದಾರಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಬೋಧನೆ ಮಾಡಲು ಆಸಕ್ತಿ ಇಲ್ಲದವರು ನಿರಂತರ ಆಧ್ಯಯನ ಮಾಡದವರು ಶಿಕ್ಷಕರೆನಿಸಿಕೊಳ್ಳಲು ಸಾದ್ಯವಿಲ್ಲ. ಮಕ್ಕಳನ್ನು ತನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸಿದರೆ, ಮಕ್ಕಳ ಮನಸ್ಸನ್ನು ಗೆದ್ದರೆ ಆದರ್ಶ ಶಿಕ್ಷಕರಾಗಲು ಸಾದ್ಯ ಎಂದರು.

ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಪ್ರಶಸ್ತಿ ವಿಜೇತರಿಗೆ ಹಿಂದಿನ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಹಾಗೂ ಡಿಡಿಪಿಐ ಶೇಷನಯನ ಕಾರಿಂಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.