ಪಡುಬಿದ್ರಿ: ‘ನಾವು ಪೇಟೆಗೆ ಹೋಗಬೇಕೆಂದರೆ. ಈ ಹೊಳೆ ದಾಟಿಯೇ ಹೋಗಬೇಕು. ಇಲ್ಲಿ ಅತಿ ಹಳೆಯದಾದ ಸಣ್ಣ ಹಲಗೆಯ ಸಂಕ ಇದೆ. ಅದು ಕೂಡ ಮುರಿದು ಹೋಗಿದೆ. ನನಗೂ, ನನ್ನ ಗಂಡನಿಗೂ ವಯಸ್ಸಾಗಿದೆ. ಆರೋಗ್ಯ ಸರಿ ಇಲ್ಲ’...
ಇದು ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲುಮಟ್ಟು ಗ್ರಾಮದ 70 ವರ್ಷದ ವಸಂತಿ ಹಾಗೂ 74 ವರ್ಷದ ಭೋಜ ಸಾಲ್ಯಾನ್ ಅವರ ಮಾತು.
ಅವರ ಮನೆಗೆ ತೆರಳಬೇಕಿದ್ದರೆ ಹೊಳೆಯ ಮೇಲೆ ನಿರ್ಮಿಸಿರುವ ಶಿಥಿಲಗೊಂಡ ಕಾಲು ಸಂಕವೇ ಏಕೈಕ ದಾರಿ. ಅವರು ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಕಾಲು ಸಂಕದ ಮೂಲಕವೇ ಬರಬೇಕು. ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ಈ ದಂಪತಿ ನಡೆದಾಡಬೇಕಾದ ಪರಿಸ್ಥಿತಿ. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲ ಅಥವಾ ಇನ್ಯಾವುದೇ ಕೆಲಸಕ್ಕೂ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
‘ಈ ಸೇತುವೆಯಲ್ಲಿ ಹೋಗಲು ಆಗುವುದಿಲ್ಲ. ಮಗಳ ಮದುವೆ ಮಾಡಿ ಆಗಿದೆ. ಗಂಡು ಮಕ್ಕಳಿಲ್ಲ. ಜೀವನವೇ ದುಸ್ತರವಾಗಿದೆ. ದಿನಸಿ ತರೋಕೆ, ಔಷಧಿ ತರೋಕೆ ನಾವೇ ಈ ಮುರುಕಲು ಸಂಕದ ಮೂಲಕ ಹೋಗಬೇಕಾದ ಪರಿಸ್ಥಿತಿ ಇದೆ. ಒಂದು ಸುರಕ್ಷಿತ ಕಾಲು ಸೇತುವೆ ನಿರ್ಮಿಸಿಕೊಟ್ಟರೆ ಬಹಳ ಉಪಕಾರವಾಗುತ್ತದೆ ಎಂದು’ ದಂಪತಿ ಮನವಿ ಮಾಡಿಕೊಂಡಿದ್ದರು.
ಇವರ ಪರಿಸ್ಥಿತಿ ಮನಗಂಡು ಮಾಹಿತಿ ಪಡೆದುಕೊಂಡ ತಹಶೀಲ್ದಾರ್ ಪ್ರತಿಭಾ ಆರ್. ಸ್ಥಳಕ್ಕೆ ತೆರಳಿ ಶಿಥಿಲಗೊಂಡ ಸೇತುವೆಯಲ್ಲಿ ನಡೆದುಕೊಂಡು ಹೋಗಿ ವೃದ್ಧ ದಂಪತಿಯ ಮನೆಗೆ ತೆರಳಿದರು. ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದರು.
‘ವಸಂತಿ, ಭೋಜ ಸಾಲ್ಯಾನ್ ದಂಪತಿಯ ಪರಿಸ್ಥಿತಿ ನಿಜಕ್ಕೂ ಶೋಚನೀಯ. ನಾನೂ ಈ ಹಲಗೆಯ ಮೇಲೆ ನಡೆದುಬಂದೆ, ನಿಜಕ್ಕೂ ಭಯವಾಯಿತು. ಕಾಲಿಟ್ಟರೆ ಅಲ್ಲಾಡುವ ಒಂದು ಹೆಜ್ಜೆ ಊರುವಷ್ಟು ಮಾತ್ರವೇ ಅಗಲವಿರುವ ಶಿಥಿಲಗೊಂಡ ಮರದ ಹಲಗೆಯ ಮೇಲೆ ನಡೆದುಕೊಂಡು ಬಂದು ಹೊಳೆ ದಾಟಿ ತಮ್ಮ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಯದ್ದು’ ಎಂದು ತಹಶೀಲ್ದಾರ್ ಪ್ರತಿಭಾ ಆರ್. ಹೇಳಿದರು.
‘ಮಳೆಗಾಲದಲ್ಲಿ ನೆರೆ ಆವರಿಸುತ್ತದೆ. ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಈ ಕಷ್ಟ ಸಹಿಸಲಾಗದೆ ಈಗಾಗಲೇ ಮನೆ ತೊರೆದು ಬೇರೆ ಕಡೆ ಹೋಗಿದಾರೆ. ಆದರೆ ಈ ದಂಪತಿಗೆ ಇರುವುದೊಂದೇ ಸೂರು. ಹೊಳೆಗೆ ಸೇತುವೆ ನಿರ್ಮಿಸಿಕೊಡಲು ಅವರು ಮನವಿ ಮಾಡಿಕೊಂಡಿದ್ದಾರೆ. ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದರು.
ಫಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದ ಅವರು ವೃದ್ಧ ದಂಪತಿ ಮನೆಗೆ ರಸ್ತೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯ ಬಗ್ಗೆ ತಹಶೀಲ್ದಾರ್ ಅವರ ಗಮನ ಸೆಳೆದದ್ದು ಪಲಿಮಾರು ಗ್ರಾಮ ಒನ್ ನಡೆಸುತ್ತಿರುವ ಇಸ್ಮಾಯಿಲ್ ಫಲಿಮಾರು. ದಂಪತಿಯ ಕಷ್ಟವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದು ಇಲ್ಲಿಗೆ ಬರುವಂತೆ ಮಾಡಿರುತ್ತಾರೆ. ಸೇತುವೆ ನಿರ್ಮಿಸಿಕೊಡಲು ತಾವೂ ಸಹಕರಿಸುವುದಾಗಿ ತಿಳಿಸಿದ್ದಾರೆ.
ಕಷ್ಟದಲ್ಲಿ ಇರುವ ನಮ್ಮ ಮೊರೆ ತಹಶೀಲ್ದಾರ್ ಅವರಿಗೆ ಮುಟ್ಟಿದೆ. ಅವರು ಇಲ್ಲಿಗೆ ಬಂದು ನಮ್ಮ ಸಮಸ್ಯೆ ಆಲಿಸಿದ್ದಾರೆ. ಸಮಸ್ಯೆ ಪರಿಹರಿಸುವ ಭರವಸೆಯನ್ನೂ ನೀಡಿದ್ದಾರೆವಸಂತಿ ಅವರಾಲುಮಟ್ಟು ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.