ADVERTISEMENT

ಉಡುಪಿ: ದಶಕದಲ್ಲೇ ಹೆಚ್ಚು ಮಳೆ ಸುರಿದ ‘ಮೇ’

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ: ಕೃಷಿ ಪೂರ್ವ ಸಿದ್ದತೆಗೆ ಹಿನ್ನಡೆ

ನವೀನ್‌ಕುಮಾರ್ ಜಿ
Published 30 ಮೇ 2025, 7:54 IST
Last Updated 30 ಮೇ 2025, 7:54 IST
ಉಡುಪಿ ನಗರದಲ್ಲಿ ಸುರಿದ ಮಳೆಗೆ ರಸ್ತೆಯೊಂದರಲ್ಲಿ ನೀರು ಸಂಗ್ರಹವಾಗಿರುವುದು
ಉಡುಪಿ ನಗರದಲ್ಲಿ ಸುರಿದ ಮಳೆಗೆ ರಸ್ತೆಯೊಂದರಲ್ಲಿ ನೀರು ಸಂಗ್ರಹವಾಗಿರುವುದು   

ಉಡುಪಿ: ಮೇ ತಿಂಗಳೆಂದರೆ ಕರಾವಳಿಯಲ್ಲಿ ಸಾಮಾನ್ಯವಾಗಿ ಬಿರು ಬಿಸಿಲಿನ ವಾತಾವರಣವಿರುತ್ತದೆ. ಜೊತೆಗೆ ಮುಂಗಾರು ಪೂರ್ವ ಮಳೆಯು ಆಗಾಗ ಸುರಿದು ಇಳೆಯನ್ನು ತಂಪಾಗಿಸುತ್ತದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವು ಕಳೆದ ಹತ್ತು ವರ್ಷಗಳಲ್ಲಿ ಮೇ ತಿಂಗಳಲ್ಲಿ ಸುರಿದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಅತಿ ಹೆಚ್ಚು.

ಈ ಬಾರಿ ಮೇ ತಿಂಗಳಲ್ಲೇ ಅಬ್ಬರಿಸಿರುವ ಮಳೆಯು ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಸುರಿದಿದೆ. ಕಳೆದ ಹತ್ತು ವರ್ಷದಲ್ಲಿ ಮುಂಗಾರು ಪೂರ್ವದಲ್ಲಿ 50 ಸೆಂ.ಮೀ.ಗಿಂತ ಹೆಚ್ಚು ಮಳೆ ಸುರಿದ ದಾಖಲೆಯೇ ಇಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ಹೇಳಿವೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮುಂಗಾರು ಪೂರ್ವದಲ್ಲಿ ಅಂದಾಜು 14 ಸೆಂ.ಮೀ.ನಷ್ಟು ವಾಡಿಕೆ ಮಳೆ ಸುರಿಯುತ್ತದೆ. ಕೆಲವೊಮ್ಮೆ ಚಂಡಮಾರುತ ರೂಪುಗೊಂಡರೆ ವಾಡಿಕೆಗಿಂತ ಸ್ವಲ್ಪ ಜಾಸ್ತಿ ಮಳೆ ಸುರಿಯುವುದು ಇದೆ.

ADVERTISEMENT

ಈ ಬಾರಿ ಮೇ 1ರಿಂದ 29ರವರೆಗೆ ಜಿಲ್ಲೆಯಲ್ಲಿ 70.5 ಸೆಂ.ಮೀ. ಮಳೆ ಸುರಿದಿದೆ. ದಶಕದಲ್ಲೇ ಮೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆ ಸುರಿದಿರುವುದು ಇದೇ ಮೊದಲು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

2021ರಲ್ಲಿ ತೌತೆ ಚಂಡಮಾರುತದ ಪರಿಣಾಮವಾಗಿ ಮೇ ತಿಂಗಳಲ್ಲಿ ವಾಡಿಕೆಗಿಂತ ಅಲ್ಪ ಜಾಸ್ತಿ ಮಳೆ ಸುರಿದಿತ್ತು. 2023ರಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತಲೂ ಅತಿ ಕಡಿಮೆ ಮಳೆ ಸುರಿದಿತ್ತು. ಆ ವರ್ಷ ರಾಜ್ಯದಾದ್ಯಂತ ಬರ ಘೋಷಿಸಲಾಗಿತ್ತು. ಅದರಂತೆ ಉಡುಪಿ ಜಿಲ್ಲೆಯ ಕಾರ್ಕಳ, ಬ್ರಹ್ಮಾವರ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿತ್ತು.

ಈ ಬಾರಿ ಅವಧಿಗಿಂತ ಮುನ್ನವೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಮೇ 20ನೇ ತಾರೀಕಿಗೆ ಬಿರುಸಿನ ಮಳೆ ಸುರಿದಿತ್ತು. ಅತಿಯಾಗಿ ಸುರಿದ ಮಳೆಯಿಂದಾಗಿ ನಗರದಾದ್ಯಂತ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಡಕುಂಟಾಗಿತ್ತು. ಮಣಿಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಮಣ್ಣು, ಕಲ್ಲುಗಳು ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ರಸ್ತೆಯಲ್ಲಿ ಸಂಗ್ರಹವಾಗಿ ಅವಾಂತರ ಸೃಷ್ಟಿಯಾಗಿತ್ತು.

ಜಿಲ್ಲೆಯಲ್ಲಿ ಭತ್ತದ ಬೆಳೆಯೇ ಪ್ರಧಾನವಾಗಿದ್ದು ಸಾಮಾನ್ಯವಾಗಿ ಮೇ ತಿಂಗಳ ಕೊನೆಗೆ ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವಧಿಗೂ ಮುನ್ನವೇ ನಿರಂತರ ಮಳೆ ಸುರಿದಿರುವುದರಿಂದ ರೈತರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೆಲವು ರೈತರು ಅಳಲು ತಿಳಿಸಿದ್ದಾರೆ.

ಈಗ ಜೋರಾಗಿ ಸುರಿದ ಮಳೆ ಇನ್ನು ಜೂನ್, ಜುಲೈ ತಿಂಗಳಲ್ಲಿ ಕಡಿಮೆಯಾಗಿ ಬಿಸಿಲಿನ ವಾತಾವರಣ ಬಂದರೆ ಭತ್ತದ ಕೃಷಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮತ್ತೆ ಗದ್ದೆಗಳಿಗೆ ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸುವ ಅನಿವಾರ್ಯತೆಯೂ ಎದುರಾಗಬಹುದು ಎಂದು ಕೆಲವು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಭತ್ತದ ಕೃಷಿಗೆ ಬೆಟ್ಟು ಗದ್ದೆಗಳಲ್ಲಿ ಬಿತ್ತನೆ ಮಾಡಲು ಸಮಸ್ಯೆ ಇಲ್ಲ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೊಂಡಿರುವುದರಿಂದ ಉಳುಮೆ ಮತ್ತು ಇತರ ಕೃಷಿ ಚಟುವಟಿಕೆಗಳ ಪೂರ್ವ ತಯಾರಿಗೆ ಸಮಸ್ಯೆಯಾಗಿದೆ.
– ರವೀಂದ್ರ ಗುಜ್ಜರಬೆಟ್ಟು, ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ

‘ಯಂತ್ರಾಧರಿತ ಕೃಷಿಗೆ ಹಿನ್ನಡೆ’

ಮುಂಗಾರುಪೂರ್ವ ಮಳೆಯು ಬಿರುಸಿನಿಂದ ಸುರಿದಿರುವುದರಿಂದ ಸಾಂಪ್ರದಾಯಿಕ ಶೈಲಿಯ ಭತ್ತದ ಕೃಷಿಗೆ ಏನೂ ತೊಂದರೆ ಇಲ್ಲ. ಆದರೆ ಯಂತ್ರೋಪಕರಣ ಆಧರಿತ ಕೃಷಿಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಧನಂಜಯ ಅಭಿಪ್ರಾಯಪಟ್ಟಿದ್ದಾರೆ.

ಯಂತ್ರೋಪಕರಣ ಬಳಸಿ ಭತ್ತದ ಕೃಷಿ ಮಾಡುವಾಗ ಯಂತ್ರದ ಮೂಲಕ ಚಾಪೆ ನೇಜಿಯನ್ನು ನೆಡಲಾಗುತ್ತದೆ. ಚಾಪೆ ನೇಜಿಯನ್ನು ಟ್ರೇ ಗಳಲ್ಲಿ ತಯಾರಿಸಲು ಒಣಗಿದ ಮಣ್ಣನ್ನು ಸಂಗ್ರಹಿಸುವ ಅಗತ್ಯವಿರುತ್ತದೆ. ಇದನ್ನು ಮೇ ಕೊನೆಯ ವಾರದಲ್ಲಿ ಮಾಡಲಾಗುತ್ತದೆ. ಆದರೆ ಈ ಬಾರಿ ಬಿರುಸಿನ ಮಳೆ ಸುರಿದಿರುವುದರಿಂದ ಅದಕ್ಕೆ ಸಮಸ್ಯೆಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.