ADVERTISEMENT

ಶಾಂತಿ ಸ್ಥಾಪನೆಯಲ್ಲಿ ಪೊಲೀಸರ ಪಾತ್ರ ಮಹತ್ತರ

ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಎಸ್ಪಿ ನಿಶಾ ಜೇಮ್ಸ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 15:47 IST
Last Updated 1 ಡಿಸೆಂಬರ್ 2019, 15:47 IST
ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಎಸ್ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಉದ್ಘಾಟಿಸಿದರು.
ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಎಸ್ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಉದ್ಘಾಟಿಸಿದರು.   

ಉಡುಪಿ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದರು.

ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರಿಗೆ ಆದರ್ಶ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್‌ ಸಿಬ್ಬಂದಿಗೆ ಕೆಲಸದ ಒತ್ತಡದ ನಡುವೆ ತಮ್ಮ ಹಾಗೂ ಕುಟುಂಬ ಆರೋಗ್ಯದ ಬಗ್ಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಗೃಹ ಇಲಾಖೆ ವರ್ಷಕ್ಕೊಮ್ಮೆ ಪೊಲೀಸರ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಕ್ರಮ ಕೈಗೊಂಡಿದೆ ಎಂದರು.

ADVERTISEMENT

ಪೊಲೀಸರು ನಿಯಮಿತ ಆಹಾರ ಸೇವನೆ ಮಾಡುವುದರ ಜತೆಗೆ ಪ್ರತಿದಿನ ವ್ಯಾಯಾಮ ಮಾಡಬೇಕು. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ಪೊಲೀಸರ ಸೇವೆಯನ್ನು ಗುರುತಿಸಿ ಆದರ್ಶ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ ಎಂದು ಅಭಿಪ್ರಾಯಪಟ್ಟರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್‌. ಚಂದ್ರಶೇಖರ್‌ ಮಾತನಾಡಿ, ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಶೇ. 18ರಿಂದ 25 ಮಂದಿಗೆ ರಕ್ತದೊತ್ತಡ ಸಮಸ್ಯೆ ಬರುತ್ತದೆ. ಈ ಪೈಕಿ ಹೆಚ್ಚಿನವರಿಗೆ ರೋಗಗಳ ಯಾವುದೆ ಮುನ್ಸೂಚನೆ ಇಲ್ಲದೆ ಹಠಾತ್‌ ಸಾವು ಸಂಭವಿಸುತ್ತದೆ. ಆದ್ದರಿಂದ 30 ವರ್ಷದ ಬಳಿಕ ವರ್ಷಕ್ಕೆ 2 ಬಾರಿ ರಕ್ತ ಪರೀಕ್ಷೆ ನಡೆಸಿ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಉಚಿತ ಹೆಪಟೈಟಿಸ್‌-ಬಿ ಲಸಿಕೆ

ಆದರ್ಶ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಹಾಗೂ ಕಾಳಜಿಗಾಗಿ ಆಸ್ಪತ್ರೆಯಲ್ಲಿ ಹೆಪಟೈಟಿಸ್‌ ಬಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಈ ಲಸಿಕೆಯನ್ನು 3 ಹಂತದಲ್ಲಿ ನೀಡಲಾಗುತ್ತಿದ್ದು, ಸಾರ್ವಜನಿಕರು ವೈದ್ಯರು ಸೂಚನೆಯಂತೆ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಎಎಸ್ಪಿ ಕುಮಾರಚಂದ್ರ, ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಪ್ರೊ. ಎ. ರಾಜಾ, ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಎಂ.ಎಸ್‌. ಉರಾಳ, ಮೂಳೆ ತಜ್ಞ ಡಾ. ಮೋಹನ್‌ದಾಸ್‌ ಶೆಟ್ಟಿ, ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್‌ ಉಪಸ್ಥಿತರಿದ್ದರು. ಡಿಯಾಗೋ ಕ್ವಾಡ್ರಸ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.