ADVERTISEMENT

ರಂಗಭೂಮಿ ಸಮಾಜದ ಸಮಸ್ಯೆಗಳ ಪ್ರತಿಬಿಂಬ: ಪ್ರಾಧ್ಯಾಪಕಿ ಸುನೀತಾ

ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:46 IST
Last Updated 24 ಫೆಬ್ರುವರಿ 2026, 7:46 IST
ರಂಗಕರ್ಮಿ ಕೃಷ್ಣ ವಿ. ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು 
ರಂಗಕರ್ಮಿ ಕೃಷ್ಣ ವಿ. ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು    

ಉಡುಪಿ: ಸಿನಿಮಾಗಳಲ್ಲಿ ರೌಡಿಸಂ, ಹೊಡೆದಾಟಗಳೇ ಕಾಣುತ್ತಿವೆ. ಆದರೆ, ನಾಟಕಗಳು ಆ ರೀತಿಯಲ್ಲಿಲ್ಲ. ಇಂದಿಗೂ ಸಮಾಜದ ಸಮಸ್ಯೆಗಳನ್ನು, ಪಿಡುಗುಗಳನ್ನು ಪ್ರತಿಬಿಂಬಿಸುತ್ತಾ ಚಿಂತನೆಗೆ ಹಚ್ಚುತ್ತವೆ ಎಂದು ಕೋಟ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಸುನೀತಾ ವಿ. ತಿಳಿಸಿದರು.

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿನಿಮಾ ನಟರು ಅನೇಕ ರೀಟೇಕ್‍ಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಆದರೆ, ರಂಗಭೂಮಿಯ ಕಲಾವಿದ ರಂಗದ ಮೇಲೆ ನಟಿಸಬೇಕು. ತಪ್ಪಾದರೆ ಅಲ್ಲಿ ರೀಟೇಕ್ ಇರುವುದಿಲ್ಲ. ಎಲ್ಲ ತಯಾರಿಗಳನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಹಾಗಾಗಿ ಶ್ರೇಷ್ಠ ನಟರು ರಂಗಭೂಮಿಯಿಂದ ಹೊರಹೊಮ್ಮುತ್ತಾರೆ ಎಂದರು.

ADVERTISEMENT

ನಾಟಕ ಸೇರಿದಂತೆ ರಂಗಭೂಮಿಯು ಸಮಾಜದ ಪ್ರತಿಬಿಂಬ. ಎಲ್ಲ ಆಗುಹೋಗುಗಳಿಗೆ ಹಿಡಿವ ಕನ್ನಡಿ ಎಂದು ತಿಳಿಸಿದರು.

ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯು. ಮೋಹನ್ ಉಪಾಧ್ಯಾಯ ಮಾತನಾಡಿ, ರಂಗಭೂಮಿಯ ಮೂಲ ಭೂಮಿಕೆಯನ್ನು ಬಿಡದೇ ಕಾಲಕ್ಕೆ ತಕ್ಕಂತೆ ನಾಟಕಗಳನ್ನು ರೂಪಿಸಬೇಕು ಎಂದರು.

ರಂಗಕರ್ಮಿ ಕೃಷ್ಣ ವಿ. ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆಯ ಉದ್ಯಮಿ ಸದಾನಂದ ಸಾಲ್ಯಾನ್, ಮಹಾಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಸುರೇಶ್ ಬಿ. ಕರ್ಕೇರ, ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ ಅಮಿನ್, ತಾಂಗದಗಡಿ ವೀರಮಾರುತಿ ವ್ಯಾಯಮ ಶಾಲೆಯ ಅಧ್ಯಕ್ಷ ಮನೋಜ್ ಕುಮಾರ್. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.

ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್. ಭಟ್ ಸ್ವಾಗತಿಸಿದರು. ನಿರ್ದೇಶಕ ದಿವಾಕರ ಕಟೀಲ್ ವಂದಿಸಿದರು, ಅಕ್ಷತ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.