ADVERTISEMENT

ಸಂಗೀತಕ್ಕೆ ತರ್ಕದ ಬಂಧನ ಇಲ್ಲ : ಚಿಂತಕ ಲಕ್ಷ್ಮೀಶ ತೋಳ್ಪಾಡಿ

ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 13:10 IST
Last Updated 8 ಸೆಪ್ಟೆಂಬರ್ 2019, 13:10 IST
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು.   

ಉಡುಪಿ: ಸಂಗೀತ ಅತ್ಯಂತ ಶ್ರೇಷ್ಠವಾದ ಕಲೆ. ಅದಕ್ಕೆ ಮಾತಿನ ಹಾಗೆ ತರ್ಕದ ಬಂಧನ ಇಲ್ಲ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ರಂಜನಿ ಸ್ಮಾರಕ ಟ್ರಸ್ಟ್‌ ಉಡುಪಿ ಹಾಗೂ ಲತಾಂಗಿ ಸ್ಕೂಲ್‌ ಆಫ್‌ ಮ್ಯೂಸಿಕ್‌ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲೆ ಎನ್ನುವುದು ತೋಡಿಕೊಳ್ಳುವ ಪ್ರಕ್ರಿಯೆ. ಇನ್ನೊಬ್ಬರನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ ತೋಡಿಕೊಳ್ಳುವಿಕೆಯೇ ಕಲೆಯ ವಿದ್ಯಮಾನವಾಗಿದೆ. ತೋಡಿಕೊಳ್ಳುವ ಭಾವ ಉಂಟಾಗದಿದ್ದರೆ ಯಾವುದೇ ಮಾತುಗಾರಿಕೆ ಅಥವಾ ಹಾಡುಗಾರಿಕೆ ಬಹಳ ಶಾಸ್ತ್ರೀಯವಾಗಿ ಉಳಿಯುವುದಿಲ್ಲ ಎಂದರು.

ADVERTISEMENT

ಮನಸ್ಸು ಕಂಪಿಸದೆ ಯಾವ ಸೌಂದರ್ಯವೂ ಇಲ್ಲ. ಮನಸ್ಸು ಕಂಪನಗೊಂಡು ಕರಗುವ ಸಂದರ್ಭದಲ್ಲಿ ಸಿಗುವ ಚೆಲುವು ಅದ್ಭುತವಾಗಿದ್ದು, ಅದನ್ನು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಮನಸ್ಸು ಕರಗುವಾಗ ಸಿಗುವ ಸಂತೋಷ ನಮ್ಮದೇ ಆಗಿದ್ದು, ಅದನ್ನು ಯಾರು ಕಿತ್ತುಕೊಳ್ಳಲು ಆಗಲ್ಲ ಎಂದು ಹೇಳಿದರು.

ತೋಡಿಕೊಳ್ಳುವಿಕೆ ಎನ್ನುವುದು ಕಲೆಗೆ ಸಂಬಂಧಿಸಿದ ಪ್ರಾಚೀನ ಸಂಗತಿ. ಸೌಂದರ್ಯದಲ್ಲಿ ಕಲೆಯ ಪರಿಣಾಮ ಬಹಳ ಮುಖ್ಯ. ಮೊತ್ತ ಮೊದಲ ಬಾರಿಗೆ ಒಂದು ಮಾತು ಅಥವಾ ಸ್ವರವನ್ನು ಆಲಿಸುವಾಗ ಉಂಟಾಗುವ ಭಾವದ ಮರುಕಳುಹಿಸುವಿಕೆಯೇ ಮನಸ್ಸು ಕರಗುವ ಪ್ರಕ್ರಿಯೆ. ಇದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಆಗುವ ಸಹಜ ಪರಿಕಲ್ಪನೆ ಆಗಿದೆ ಎಂದು ಅವರು ತಿಳಿಸಿದರು.

ಸರ್ವಾಧಿಕಾರಿಗಳು ಸಂಗೀತ ಕೇಳಬಾರದು ಎಂದಿಲ್ಲ ಅಥವಾ ಸಂಗೀತ ಕೇಳುವವರು ಸರ್ವಾಧಿಕಾರಿಗಳಾಗಿ ಇರಬಹುದು. ಆದರೆ ಎಲ್ಲರಿಗೂ ಹೃದಯ ಎನ್ನುವುದು ಇದೆ. ಅದನ್ನು ಸಂಗೀತದ ಮೂಲಕ ತಲುಪಲು ಸಾಧ್ಯ. ಮಾತಿಗೆ ಆ ಸಾಮರ್ಥ್ಯ ಇಲ್ಲ. ಕರಗುವ ಕ್ಷಣವನ್ನು ಹೃದಯ ಕಾದು ಕುಳಿತಿರುತ್ತದೆ. ಆದರೆ ನಾಗರಿಕತೆಯ ಕ್ರಾಂತಿಯಿಂದ ಅದನ್ನು ಕಾಣಿಸದಂತೆ ನಾವು ಮಾಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಲೆ ಲೌಕಿಕ, ಅಲೌಕಿಕದ ಮಿಶ್ರಣ

ನಮ್ಮ ಒಳಗಿನ ಐಕ್ಯ ಉದ್ದೀಪನ ಆಗದಿದ್ದರೆ ಹಾಡುವುದು ವ್ಯರ್ಥ. ನಿಜವಾದ ಮಾತು ಮಾತ್ರ ಇರರಿಗೆ ಮುಟ್ಟುತ್ತದೆ. ನಾವು ನಮಗೋಸ್ಕರ ಹಾಡಬೇಕು. ಆಗ ಮಾತ್ರ ಇನ್ನೊಬ್ಬರ ಹೃದಯವನ್ನು ಮುಟ್ಟಲು ಸಾಧ್ಯ. ಅನುರಾಗ ಮಾತ್ರವಲ್ಲ, ವೈರಾಗ್ಯವೂ ಒಂದು ರಸ. ಅದು ಅಲೌಕಿಕ ರಸವೂ ಆಗಿದೆ. ಅದಕ್ಕೆ ಬೇಕಾಗುವ ಉದ್ದೀಪನ ಸಿಕ್ಕರೆ ಅದು ಮತ್ತೆ ಮಿಶ್ರ ರಸಕ್ಕೆ ಪರಿವರ್ತನೆಗೊಳ್ಳುತ್ತದೆ. ಲೌಕಿಕ ಮತ್ತು ಅಲೌಕಿಕ ರಸದ ಮಿಶ್ರಣವನ್ನು ಕಲೆ ಹಿಡಿದಿಟ್ಟುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.