
ಉಡುಪಿ: ‘ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಮಹಾತ್ಮ ಗಾಂಧಿ ಅವರ ಹೆಸರಿಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಗಾಂಧಿ ಅವರ ಹೆಸರಿಟ್ಟ ಕೂಡಲೇ ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರವಾಗದು, ಅವರ ಸಿದ್ಧಾಂತಗಳೂ ಜಾರಿಯಾಗಬೇಕು’ ಎಂದು ಚಿಂತಕ ವಿಲ್ಫ್ರೆಡ್ ಡಿಸೋಜ ಉಪ್ಪಿನಂಗಡಿ ಹೇಳಿದರು.
ರಥಬೀದಿ ಗೆಳೆಯರು ಉಡುಪಿ, ಸಹಬಾಳ್ವೆ ಉಡುಪಿ, ಸೌಹಾರ್ದ ಕರ್ನಾಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ. ನಗರದ ವಿಮಾ ನೌಕರರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಗಾಂಧೀಜಿಯವರ ಗ್ರಾಮೀಣ ಭಾರತ- ಪ್ರಸ್ತುತ ಸವಾಲುಗಳು’ ವಿಷಯದ ಕುರಿತ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದು ಕಾವಿ, ಖಾದಿ ಹಾಕಿದವರು ಗಾಂಧಿ ಅವರ ಸಿದ್ಧಾಂತಕ್ಕೆ ಜೀವ ತುಂಬುವ ಕೆಲಸವನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯದೆ ಹಲವು ವರ್ಷಗಳಾಗಿವೆ’ ಎಂದರು.
‘ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವನ್ನು ಕಾರ್ಯರೂಪಕ್ಕಿಳಿಸುವ ಗಂಭೀರ ಪ್ರಯತ್ನವನ್ನು ಯಾವ ಸರ್ಕಾರಗಳೂ ಮಾಡಿಲ್ಲ. ಮನರೇಗಾವು ವಾರ್ಷಿಕ ₹1.70 ಲಕ್ಷ ಕೋಟಿ ಅನುದಾನ ಬಳಕೆಯಾಗುವ ಯೋಜನೆಯಾಗಿದ್ದು, ಮಹಾತ್ಮ ಗಾಂಧಿ ಅವರ ನೆನಪನ್ನು ಅಳಿಸುವ ಭಾಗವಾಗಿ ಯೋಜನೆಯನ್ನು ಬದಲಿಸಲಾಗಿದೆ’ ಎಂದರು.
‘ಗ್ರಾಮಗಳಲ್ಲಿ ಶಿಕ್ಷಣ, ಮನೋರಂಜನೆ, ರಕ್ಷಣೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ನೈರ್ಮಲ್ಯ, ಆರೋಗ್ಯ ಸೇವೆ, ನ್ಯಾಯ ವ್ಯವಸ್ಥೆ ಇರಬೇಕೆಂಬ ಆಶಯವನ್ನು ಗಾಂಧಿ ಅವರು ಹೊಂದಿದ್ದರು. ಆದರೆ ಅದು ಸಾಕಾರವಾಗಲೇ ಇಲ್ಲ’ ಎಂದು ಹೇಳಿದರು.
‘ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜನರು ತಮ್ಮ ಮಕ್ಕಳನ್ನು ನಗರದ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನಾವು ಗಮನ ಕೊಟ್ಟಿಲ್ಲ. ರಾಜ್ಯದ ಒಟ್ಟು ಗ್ರಾಮ ಪಂಚಾಯಿತಿಗಳಲ್ಲಿ ಶೇ 50 ರಷ್ಟು ಗ್ರಾ.ಪಂ.ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ’ ಎಂದು ತಿಳಿಸಿದರು.
‘ನಗರೀಕರಣಕ್ಕೆ ಆದ್ಯತೆ ನೀಡಬೇಕು. ಆದರೆ ಇಂದು ನಾವು ಅದರ ಮಿತಿಯನ್ನು ಮೀರಿದ್ದೇವೆ. ಕೃಷಿ ಇಂದು ಆಕರ್ಷಣೆ ಕಳೆದುಕೊಂಡಿದೆ. ಯುವಕರು ಅದರತ್ತ ಆಸಕ್ತಿ ತೋರುತ್ತಿಲ್ಲ. ಗ್ರಾಮಗಳೇ ನಾಶವಾಗುತ್ತಿವೆ’ ಎಂದು ಪ್ರತಿಪಾದಿಸಿದರು.
‘ಹಳ್ಳಿಗಳಿಂದ ಯುವಕರು ವಲಸೆ ಹೋಗುವುದನ್ನು ನಿಲ್ಲಿಸಬೇಕಾದರೆ. ಗ್ರಾಮ ಮಟ್ಟದಲ್ಲೇ ಉದ್ಯೋಗಗಳು ಸೃಷ್ಟಿಯಾಗಬೇಕು. ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಗ್ರಾಮಗಳು ಬಲಿಷ್ಠವಾಗಲು ಸಾಧ್ಯ’ ಎಂದರು.
ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಇದ್ರಿಸ್ ಹೂಡೆ ಉಪಸ್ಥಿತರಿದ್ದರು.
ಸಂತೋಷ್ ನಾಯಕ್ ಪಟ್ಲ ಸ್ವಾಗತಿಸಿದರು. ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ. ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರ ಅನಗತ್ಯ ಘೋಷಣೆ ಮಾಡುವ ಬದಲು ಗ್ರಾಮಗಳ ಬಲವರ್ಧನೆಗೆ ಇರುವಂತಹ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಕಾಯ್ದೆಗಳನ್ನು ಸದ್ಬಳಕೆ ಮಾಡಬೇಕು. ಇಲ್ಲದಿದ್ದರೆ ಗ್ರಾಮ ಸ್ವರಾಜ್ಯದ ಕನಸು ನನಸಾಗದುವಿಲ್ಫ್ರೆಡ್ ಡಿಸೋಜ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.