
ಬಿ. ವೀರಪ್ಪ
ಉಡುಪಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಉಡುಪಿಯ ತಾಲ್ಲೂಕು ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ್ದ ವೇಳೆ ಸಿಬ್ಬಂದಿ ಚೀಟಿ ವ್ಯವಹಾರ ನಡೆಸುತ್ತಿದ್ದ ಪುಸ್ತಕ ಪತ್ತೆಯಾಯಿತು.
ದಾಖಲೆಗಳ ಪರಿಶೀಲನೆ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಬ್ಬಂದಿ ಚೀಟಿ ವ್ಯವಹಾರದ ಲೆಕ್ಕ ಬರೆದಿಟಿದ್ದ ಪುಸ್ತಕ ಕಣ್ಣಿಗೆ ಬಿತ್ತು. ಪರಿಶೀಲಿಸಿದಾಗ ಅದರಲ್ಲಿ ಉಪ ತಹಶೀಲ್ದಾರ್ ಐರಿನ್ ನೊರೋನ್ಹಾ ಸೇರಿದಂತೆ ವಿವಿಧ ಸಿಬ್ಬಂದಿ ಹೆಸರು ಮತ್ತು ಅವರು ಪಾವತಿ ಮಾಡಿರುವ ಮೊತ್ತವನ್ನು ಬರೆಯಲಾಗಿತ್ತು.
ಕಚೇರಿಯಲ್ಲಿ ಚೀಟಿ ವ್ಯವಹಾರ ನಡೆಸಲು ಅನುಮತಿ ಪಡೆದಿದ್ದೀರಾ ಎಂದು ತಹಶೀಲ್ದಾರ್ ಗುರುರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು, ಸರ್ಕಾರಿ ಕಚೇರಿಯಲ್ಲಿ ಈ ರೀತಿಯ ವ್ಯವಹಾರ ನಡೆಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಬ್ಯಾಗ್‌ನೊಳಗೆ ದಾಖಲೆ: ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿ ವಿಭಾಗಕ್ಕೆ ತೆರಳಿ ಉಪ ಲೋಕಾಯುಕ್ತರು ಪರಿಶೀಲಿಸುತ್ತಿದ್ದ ವೇಳೆ ಹೊರಗುತ್ತಿಗೆಯಡಿ ನೇಮಕಗೊಂಡಿದ್ದ ಡಾಟಾ ಎಂಟ್ರಿ ಸಿಬ್ಬಂದಿಯೊಬ್ಬರ ಬ್ಯಾಗ್‌ನಲ್ಲಿ ಸರ್ಕಾರಿ ದಾಖಲೆಗಳು ಪತ್ತೆಯಾದವು.
ಜನನ ಪ್ರಮಾಣಪತ್ರ, ವಿವಾಹ ನೋಂದಣಿ ಪ್ರಮಾಣಪತ್ರ ಸೇರಿ 30ರಷ್ಟು ವಿವಿಧ ದಾಖಲೆಗಳು ಸಿಬ್ಬಂದಿ ಸುನಿಲ್ ಅವರ ಬ್ಯಾಗ್‌ನಲ್ಲಿ ಪತ್ತೆಯಾದವು. ಈ ಕುರಿತು ಪ್ರಶ್ನಿಸಿದಾಗ ಪರಿಶೀಲಿಸಲು ಮನೆಗೆ ಒಯ್ಯಲು ಬ್ಯಾಗ್‌ನಲ್ಲಿ ಇಟ್ಟಿರುವುದಾಗಿ ತಿಳಿಸಿದರು.
ಈ ಸಂಬಂಧ ಉಪ ನೋಂದಣಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತ ಅವರು, ಈ ಕುರಿತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.