ADVERTISEMENT

ಜನರ ಹಣ ಪೋಲು ಮಾಡಬೇಡಿ: ಮಾಜಿ ಶಾಸಕ ಕೆ. ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:57 IST
Last Updated 12 ನವೆಂಬರ್ 2025, 4:57 IST
ಕೆ.ರಘುಪತಿ ಭಟ್
ಕೆ.ರಘುಪತಿ ಭಟ್   

ಉಡುಪಿ: ‘ನಗರದ 12 ಜಂಕ್ಷನ್‌ಗಳಲ್ಲಿ ಸಿಗ್ನಲ್‌ ಲೈಟ್‌ಗಳನ್ನು ಸ್ಥಾಪಿಸಲು ಈಗಾಗಲೇ ಟೆಂಡರ್‌ ನೀಡಿರುವುದನ್ನು ಕಾನೂನುಬದ್ಧವಾಗಿ ರದ್ದು ಮಾಡದೆ, ಹೊಸದಾಗಿ ಟೆಂಡರ್‌ ಕರೆದು ಟ್ರಾಫಿಕ್‌ ಸಿಗ್ನಲ್‌ ಲೈಟ್‌ ಅಳವಡಿಸಲು ಮುಂದಾಗುವ ಮೂಲಕ ನಗರಸಭೆಯ ಅಧಿಕಾರಿಗಳು ಜನರ ಹಣ ಪೋಲು ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಹಿಂದಿನ ಟೆಂಡರ್‌ನಲ್ಲಿ ಲೋಪಗಳಿದ್ದರೆ ರದ್ದು ಮಾಡಿ, ಆದರೆ ವಿನಾಕಾರಣ ರದ್ದು ಮಾಡಬೇಡಿ. ಅಭಿವೃದ್ಧಿಯನ್ನು ಕುಂಠಿತಗೊಳಿಸುವ ರಾಜಕೀಯವನ್ನು ಉಡುಪಿಯ ಜನರು ಸಹಿಸುವುದಿಲ್ಲ’ ಎಂದು ಹೇಳಿದರು.

‘ನಾನು ಶಾಸಕನಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್‌ ಕಲ್ಪನೆಯಂತೆ, ನಗರಸಭೆ ಹಾಗೂ ಸರ್ಕಾರದ ಅನುದಾನ ಬಳಸದೆ ಕಾರ್ಯನಿರ್ವಹಿಸುವ ಸ್ಮಾರ್ಟ್ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಯೋಜನೆಗಾಗಿ ಟೆಂಡರ್‌ ನೀಡಲಾಗಿತ್ತು. ಆ ಯೋಜನೆಗಾಗಿ ಅಂದಿನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಭೆಗಳು ನಡೆದಿದ್ದವು’ ಎಂದು ತಿಳಿಸಿದರು.

ADVERTISEMENT

‘ಈ ಯೋಜನೆಯಂತೆ 12 ಜಂಕ್ಷನ್‌ಗಳಲ್ಲಿ ಸಿಗ್ನಲ್‌ ಲೈಟ್‌ ಅಳವಡಿಸಿದರೆ ಅದರ ಎಲ್‌ಇಡಿ ಪರದೆಯಲ್ಲಿ ಬರುವ ಜಾಹೀರಾತಿನ ಆದಾಯದಲ್ಲಿ ಪ್ರತಿ ಸಿಗ್ನಲ್‌ನಿಂದ ಪ್ರತಿ ತಿಂಗಳಿಗೆ ನಗರಸಭೆಗೆ ₹20 ಸಾವಿರ ಆದಾಯ ಬರುತ್ತಿತ್ತು. ಆದರೆ ಅದನ್ನು ಜಾರಿಗೊಳಿಸದೆ ಹೊಸದಾಗಿ ಎರಡು ಜಂಕ್ಷನ್‌ಗಳಿಗೆ ಅಂದಾಜು ₹48 ಲಕ್ಷ ಖರ್ಚು ಮಾಡಿ ಸಿಗ್ನಲ್ ಲೈಟ್‌ ಅಳವಡಿಸಲು ಮುಂದಾಗುವ ಮೂಲಕ ಜನರ ಹಣ ಪೋಲು ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಹಿಂದಿನ ಯೋಜನೆಯಂತೆ ಸಿಗ್ನಲ್ ಕಂಬಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ, ಎಎನ್‌ಪಿಆರ್‌ ಕ್ಯಾಮೆರಾ, ಎಲ್‌ಇಡಿ ಪರದೆಯನ್ನು ಅಳವಡಿಸಬಹುದಿತ್ತು. ಅದಕ್ಕೆ ನಗರಸಭೆ ಯಾವುದೇ ಹಣ ನೀಡುವ ಅಗತ್ಯವಿರಲಿಲ್ಲ. ಆದರೆ ಆ ಯೋಜನೆಯನ್ನು ಜಾರಿಗೆ ತರಲು ಬಿಡಲಿಲ್ಲ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳನ್ನೂ ಭೇಟಿಯಾಗಿದ್ದೇನೆ. ಮುಂದೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಮಹೇಶ್‌ ಠಾಕೂರ್‌ ಉಪಸ್ಥಿತರಿದ್ದರು.

‘ಸಂಯಮ ಉಡುಪಿಯ ಕಾರ್ಯಕರ್ತರಿಗೆ ಮಾತ್ರಾನಾ?’

ಉಡುಪಿ: ‘ಬಿಜೆಪಿಯಲ್ಲಿ ಸಂಯಮ ಇರಬೇಕಾದುದು ಉಡುಪಿಯ ಕಾರ್ಯಕರ್ತರಿಗೆ ಮಾತ್ರಾನಾ? ಉಳಿದವರಿಗೆ ಅದು ಅನ್ವಯಿಸುವುದಿಲ್ಲವೇ’ ಎಂದು ರಘುಪತಿ ಭಟ್‌ ಪ್ರಶ್ನಿಸಿದರು. ಈಚೆಗೆ ಉಡುಪಿಯಲ್ಲಿ ನಡೆದಿದ್ದ ಬಿಜೆಪಿ ನೂತನ ಜಿಲ್ಲಾ ಕಚೇರಿ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡರೊಬ್ಬರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಬಿ.ವೈ. ವಿಜಯೇಂದ್ರ ಅವರಿಗೆ ಮುಂದಿನ ಸಲ ಶಾಸಕ ಸ್ಥಾನ ತ್ಯಾಗ ಮಾಡಲು ಹೇಳಿ ಅಥವಾ ಅಪ್ಪ ಮತ್ತು ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಸ್ಥಾನ ಕೊಟ್ಟು ಇನ್ನೊಬ್ಬರಿಗೆ ಪಕ್ಷಕ್ಕೆ ದುಡಿಯಲು ಹೇಳಿ ಆ ಮೂಲಕ ಅವರ ಸಂಯಮ ಪರೀಕ್ಷಿಸಿ’ ಎಂದರು. ‘2023ರಲ್ಲಿ ನನಗೆ ಕ್ಷುಲ್ಲಕ ಕಾರಣಕ್ಕೆ ಶಾಸಕ ಸ್ಥಾನ ನಿರಾಕರಿಸಲಾಯಿತು. ಆದರೂ ನಾನು ಸಂಯಮ ಪಾಲಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.