ಉಚ್ಚಿಲದಲ್ಲಿ ಉಡುಪಿ ಉಚ್ಚಿಲ ದಸರಾ-೨೦೨೫ರ ಎಂಟನೇ ದಿನವಾದ ಸೋಮವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು.
ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ 2025ರಲ್ಲಿ ಎಂಟನೇ ದಿನವಾದ ಸೋಮವಾರ ವಿಚಾರ ಗೋಷ್ಠಿ, ಕವಿಗೋಷ್ಠಿ ನಡೆಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾತೆ ಮಹಾಗೌರಿ ದೇವಿ ಆರಾಧನೆ ನಡೆಯಿತು.
‘ಮೀನುಗಾರಿಕೆಯಲ್ಲಿ ಮೊಗವೀರರು ಪ್ರಸಕ್ತ ಸ್ಥಿತಿಗತಿ’ ಬಗ್ಗೆ ಚಿಂತಕ ಪ್ರಕಾಶ್ ಮಲ್ಪೆ ವಿಚಾರ ಮಂಡಿಸಿದರು. ‘ಮೀನುಗಾರರಿಗೆ ಸರ್ಕಾರಿ ಸೌಲಭ್ಯಗಳು’ ಬಗ್ಗೆ ಮೀನುಗಾರಿಕೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ವಿಚಾರಗೋಷ್ಠಿ ನಿರ್ವಹಿಸಿದರು.
ಸೌಮ್ಯಾ ಪುತ್ರನ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪುಷ್ಪಾ ಹೊಸಬೆಟ್ಟು, ರೇಖಾ ಸತೀಶ್, ಸೇವಂತಿ ಪಡುಬಿದ್ರಿ, ಜಿ.ಪಿ. ಕುಸುಮಾ, ಓಂದಾಸ್ ಕಣ್ಣಂಗಾರ್, ಯಶವಂತ ಬೋಳೂರ್, ಯೋಗೀಶ್ ಕಾಂಚನ್, ಉಮೇಶ್ ಎಚ್. ಕರ್ಕೇರ, ಪ್ರಕಾಶ್ ಸುವರ್ಣ, ಅಶೋಕ್ ತೆಕ್ಕಟ್ಟೆ ಕವನ ವಾಚಿಸಿದರು. ವಿ.ಕೆ. ಯಾದವ್ ಸಸಿಹಿತ್ಲು ನಿರ್ವಹಿಸಿದರು.
ಬೆಳಿಗ್ಗೆ ಉದಯಪೂಜೆ, ನಿತ್ಯ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಸರಸ್ವತಿ ಕಲ್ಪೋಕ್ತ ಪೂಜೆ ನಡೆದವು. ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಭಜನೆ ಸಂರ್ಕೀತನೆ, ಜನಾರ್ದನ ಉಡುಪಿ ತಂಡದಿಂದ ಭಕ್ತಿ ಗೀತಾಂಜಲಿ, ಸಂಗೀತ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಮಂಗಳೂರಿನ ಸಮಾಜ ಸುಧಾಕರ ಸಂಘದಿಂದ ನೃತ್ಯ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ನೃತ್ಯ ಮಾಧುರ್ಯ ತಂಡದ ಪ್ರತಿಭಾ ಎ. ಕುಮಾರ್ ಅವರ ಶಿಷ್ಯಂದಿರಿಂದ ಭರತನಾಟ್ಯ, ಜಾನಪದ ನೃತ್ಯ, ನಾಟ್ಯ ನಿಲಯಂ ಮಂಜೇಶ್ವರ ತಂಡದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಇಂದಿನ ಕಾರ್ಯಕ್ರಮ:
ಸಿದ್ಧಿಧಾತ್ರಿ ದೇವಿ ಆರಾಧನೆ, ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಭಕ್ತಿ ಗೀತಾಂಜಲಿ, ವಿದುಷಿ ರೇಖಾ ಸುಬ್ರಹ್ಮಣ್ಯ ಶಿವಮೊಗ್ಗ ತಂಡದಿಂದ ವೀಣಾವಾದನ, ನೃತ್ಯ ವೈವಿಧ್ಯ, ‘ಜೋಡು ಜೀಟಿಗೆ’ ತುಳು ಜನಪದ ನಾಟಕ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.